ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಕಲಬುರಗಿ : 2023ರ ರಾಜ್ಯ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಸರ್ಕಾರ ರಚನೆಯಾದ ಬೆನ್ನಲ್ಲೇ ಮೊದಲು ಶಕ್ತಿ ಯೋಜನೆ ಜಾರಿಯಾಗಿತ್ತು. ನಾಳೆ ಎರಡನೇ ಯೋಜನೆಯಾದ ಗೃಹಜ್ಯೋತಿಗೆ ಕಲುಬುರಗಿಯಲ್ಲಿ ಚಾಲನೆ ಸಿಗಲಿದೆ. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡುವರು.
ಈ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿನ ನೂತನ ವಿದ್ಯಾಲಯ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಜೆಸ್ಕಾಂ ಸಿದ್ದತೆ ನಡೆಸಿಕೊಂಡಿದೆ. ಇಂದು ಪೂರ್ವಭಾವಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜೆಸ್ಕಾಂ ಎಂಡಿ ರಾಹೂಲ್ ಪಾಂಡ್ವೆ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಾದ ಬೀದರ್, ಯಾದಗಿರಿ, ರಾಯಚೂರು, ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ಕಲಬುರಗಿ ಜನರನ್ನೊಳಗೊಂಡಂತೆ ಬೃಹತ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್ ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಕಾರ್ಯಕ್ರಮಕ್ಕೆ 10 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ವೇದಿಕೆಯ ಮೇಲೆ 50 ಪ್ರಮುಖ ನಾಯಕರುಗಳಿಗೆ ಅವಕಾಶ ಕಲ್ಪಿಸಲಾಗಿದೆ. ವೇದಿಕೆಯಲ್ಲಿ ಮೇಲೆ 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ಬಿಲ್ ವಿತರಿಸಲಾಗುತ್ತದೆ.
ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, "ರಾಜ್ಯಾದ್ಯಂತ 5 ವಿದ್ಯುತ್ ನಿಗಮಗಳಲ್ಲಿ 1,41,23,200 ಫಲಾನುಭವಿಗಳು ಗೃಹಜ್ಯೋತಿ ಯೋಜನೆ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಬೆಸ್ಕಾಂ ನಿಗಮದಲ್ಲಿ 54,99,031, ಸೆಸ್ಕಾಂ 20,29,463, ಜೆಸ್ಕಾಂ 20,22,996, ಹೆಸ್ಕಾಂ 30,66,143, ಮೆಸ್ಕಾಂ 14,53,001 ಸಾವಿರ ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಜೆಸ್ಕಾಂ ನಿಗಮದ ಕಲಬುರಗಿ ವಿಭಾಗದಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ ಬಳ್ಳಾರಿ 2,26,272, ಬೀದರ್ 3,17,221, ಕೊಪ್ಪಳ 2,56,609, ರಾಯಚೂರು 2,66,154, ವಿಜಯನಗರ 2,38,220, ಯಾದಗಿರಿ 1,68,845, ಹಾಗು ಕಲಬುರಗಿಯಲ್ಲಿ 4,69,029, ಲಕ್ಷ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಅದನ್ನು ಜನರಿಗೆ ತಲುಪಿಸಲಬೇಕು ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ನಾಯಕರು ಹಾಗು ಸ್ಥಳೀಯ ಮುಂಖಡರ ನೇತೃತ್ವದಲ್ಲಿ ನಾಳೆ ಎರಡನೇ ಯೋಜನೆಗೆ ಚಾಲನೆ ಸಿಗಲಿದೆ" ಎಂದರು.
ಇದನ್ನೂ ಓದಿ :ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ತಿಂಗಳೊಳಗೆ 1 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಹಣ ಜಮೆ: ಕೆ ಎಚ್ ಮುನಿಯಪ್ಪ