ಬೆಂಗಳೂರು:ಕರ್ನಾಟಕದಲ್ಲಿ ಅಷ್ಟ ಲಕ್ಷ್ಮೀಯರೆಲ್ಲಾ ಓಡಿ ಹೋಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರಂತೂ ಡಬ್ಬಲ್ ದರಿದ್ರ ಲಕ್ಷ್ಮಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದ್ದಾರೆ. ಬೆನ್ಸನ್ ಟೌನ್ ನ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಷ್ಟ ಲಕ್ಷ್ಮೀಯರೆಲ್ಲಾ ವಾಪಸ್ ಬರುತ್ತಾರೆ ಎಂದು ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಗೆ ವ್ಯಂಗ್ಯವಾಡಿದ ಅವರು, ವಾರ್ಷಿಕ ಬಜೆಟ್ ಲೆಕ್ಕ ಹಾಕದೇ ಉಚಿತ ಘೋಷಣೆಗಳನ್ನು ಮಾಡಲಾಗುತ್ತಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯಲ್ಲ. ಅಲ್ಲಿ ಯಾಕೆ ಈ ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ. ಉಚಿತ ಘೋಷಣೆಗಳಿಂದ ಓಲೈಸುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನಿಂದ ಗೃಹಲಕ್ಷ್ಮಿ ಯೋಜನೆ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಇಬ್ರಾಹಿಂ ಅವರು, ರಾಜಸ್ಥಾನ, ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲಿ ಯಾಕೆ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿಲ್ಲ. ಜನರಿಗೆ ಇನ್ನೂ ಎಷ್ಟು ದಿನ ಅಂತ ಟೋಪಿ ಹಾಕುತ್ತೀರಾ ಎಂದು ಪ್ರಶ್ನಿಸಿದರು.
ರೈತರ ಸಮಸ್ಯೆ ಮರೆತ ಆಯಮ್ಮ:ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು, ಉತ್ತರ ಪ್ರದೇಶದಲ್ಲಿ ಪ್ರಚಾರ ಮಾಡಿ 403 ಸ್ಥಾನದಲ್ಲಿ ಕೇವಲ 2 ಸ್ಥಾನ ತೆಗೆದುಕೊಂಡರು. ನಿಮ್ಮ ಆಟ ನಿಮ್ಮ ಊರಲ್ಲೇ ನಡೆಯಲ್ಲ. ಪರ ಊರಲ್ಲಿ ನಡೆಯುತ್ತದೆಯೇ?. ರೈತರ ಬಗ್ಗೆ, ರೈತರ ಸಮಸ್ಯೆಗಳ ಬಗ್ಗೆ ಚಕಾರ ಎತ್ತಿಲ್ಲ. ಆಯಮ್ಮನಿಗೆ ಗೊತ್ತಿಲ್ಲದಿದ್ದರೆ ಡಿ.ಕೆ.ಶಿವಕುಮಾರ್ ಅವರಾದರೂ ಹೇಳಿಕೊಡಬೇಕಿತ್ತು ಎಂದು ವ್ಯಂಗ್ಯವಾಡಿದರು.
ಶ್ರೀಮಂತರ ಮನೆ ನಾಯಿಗೆ ಉಚಿತ ವಿದ್ಯುತ್ : ಕಾಂಗ್ರೆಸ್ ನ ಉಚಿತ ಘೋಷಣೆಗಳು ಸರಿಯಲ್ಲ. ಶ್ರೀಮಂತರ ಮನೆಯ ನಾಯಿಗೆ ಉಚಿತ ವಿದ್ಯುತ್ ಕೊಡುತ್ತೀರಾ. ಬಡವರ ಮನೆಗೆ ಕರೆಂಟ್ ಕೊಡುವ ಕೆಲಸ ಆಗಬೇಕಿದೆ.ಇನ್ನೂರು ಯೂನಿಟ್ ಅಂದರೆ 800 ರೂ. ಆಗುತ್ತದೆ. ನಗರದ ಜನರಿಗೆ ಬೆಳಕು ಕೊಟ್ಟರೆ ಸಾಕಾ, ರೈತನ ಬದುಕು ಬೆಳಕಾಗಬಾರದಾ. ಶ್ರೀಮಂತರ ಮನೆಯ ನಾಯಿ ಇರುವ ಏರ್ ಕಂಡೀಷನ್ ರೂಂಗೆ ಕರೆಂಟ್ ಇದೆ. ಅನ್ನ ಬೆಳೆಯುವ ರೈತನ ಮನೆಗೆ ಕರೆಂಟ್ ಬೇಡವೇ?. ರಾಜಸ್ಥಾನ, ಛತ್ತೀಸ್ಗಢದಲ್ಲಿ ದರಿದ್ರ ಲಕ್ಷ್ಮಿ ಇದೆಯೇ?. ಅಲ್ಲಿ ಮಾಡಿ ತೋರಿಸಿ ಹೇಳಬೇಕಿತ್ತು ಎಂದು ಪ್ರಶ್ನಿಸಿದರು.