ಬೆಂಗಳೂರು :ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಹಾ ಜನತೆಗೆ 5 ಗ್ಯಾರಂಟಿಗಳನ್ನು ಪ್ರಣಾಳಿಕೆ ಮುಖಾಂತರ ನೀಡಿತ್ತು. ನಮ್ಮ ಕಾಂಗ್ರೆಸ್ ಪಕ್ಷದ ಐದನೇ ಗ್ಯಾರಂಟಿಯನ್ನು ಸರ್ಕಾರವು ವಾಗ್ದಾನದಂತೆ ಜಾರಿಗೊಳಿಸಲಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರಸ್ತುತ ನಮ್ಮ ಐದನೇ ಗ್ಯಾರಂಟಿಯಾದ ಯುವ ನಿಧಿ ಯೋಜನೆಯನ್ನು ಇದೇ ಡಿಸೆಂಬರ್ ತಿಂಗಳ ಕೊನೆಯಲ್ಲಿ ನಿರುದ್ಯೋಗಿ ಪದವೀಧರ ಮತ್ತು ಐಟಿಐ ಪದವೀಧರರು ಗೌರವ ಧನ ಪಡೆಯಲು ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿ ವಾಗ್ದಾನದ ಮೇಲೆ ವಿಶ್ವಾಸವಿಟ್ಟು ಮಹಾಜನತೆಯು ವಿಧಾನಸಭೆಯಲ್ಲಿ 136 ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ನೀಡಿದೆ. ಈ ಮೂಲಕ ನಮ್ಮ ಸರ್ಕಾರದ ಜವಾಬ್ದಾರಿ ಇಮ್ಮಡಿಗೊಳಿಸಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಂಪುಟದಲ್ಲೇ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸುವ ನಿರ್ಧಾರ ಕೈಗೊಂಡು ಅಧಿಸೂಚನೆ ಹೊರಡಿಸಲಾಯಿತು. ಮೊದಲನೆಯದಾಗಿ ಶಕ್ತಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರತಿ ದಿನ ಸುಮಾರು 60 ರಿಂದ 62 ಲಕ್ಷ ಮಹಿಳೆಯರು ಪ್ರಯಾಣಿಸುವ ಅವಕಾಶ ದೊರಕಿದೆ. ಇದುವರೆಗೆ 114. 54 ಕೋಟಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ತೆರಳಿದ್ದಾರೆ. ಅದರ ವೆಚ್ಚ 2,700 ಕೋಟಿ ರೂ.ಗಳಾಗಿವೆ ಎಂದು ಹೇಳಿದ್ದಾರೆ.
ಗೃಹ ಜ್ಯೋತಿಯಡಿ ಮಾಸಿಕ 800 ಕೋಟಿ ರೂ ಖರ್ಚು :ಮಾಸಿಕ 200 ಯುನಿಟ್‌ವರೆಗೆ ವಿದ್ಯುತ್ ಉಪಯೋಗಿಸಿದ ರಾಜ್ಯದ 1 ಕೋಟಿ 60 ಲಕ್ಷ ಕುಟುಂಬಗಳ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇದರಿಂದ ತಿಂಗಳಿಗೆ ಸುಮಾರು 800 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.