ಕರ್ನಾಟಕ

karnataka

ETV Bharat / state

ಹಿಂದಿನ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ಸರ್ಕಾರದ ಆದೇಶ - ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಸಿಎಂ ಆದೇಶ

ಮುಂದುವರಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

kempanna meets siddaramaiah
ಸಿಎಂ ಸಿದ್ದರಾಮಯ್ಯ ಭೇಟಿಯಾದ ಕೆಂಪಣ್ಣ

By

Published : Jun 29, 2023, 7:26 AM IST

Updated : Jun 29, 2023, 7:51 AM IST

ಬೆಂಗಳೂರು: ಸರ್ಕಾರದ ಎಲ್ಲ ಇಲಾಖೆಗಳು, ನಿಗಮಗಳು, ಮಂಡಳಿ, ಪ್ರಾಧಿಕಾರಗಳ ಮುಂದುವರಿದ ಹಿಂದಿನ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದಂತೆ ಹೊಸ ಸರ್ಕಾರ ರಚನೆಯಾದ ಬಳಿಕ ಆದೇಶ ಹೊರಡಿಸಲಾಗಿತ್ತು. ಇದೀಗ ಈ ಆದೇಶವನ್ನು ಭಾಗಶಃ ಮಾರ್ಪಡಿಸಿ, ಕೆಲ ನಿರ್ದೇಶನಗಳಡಿ ಹಿಂದಿನ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ಸರ್ಕಾರ ಸೂಚಿಸಿದೆ.

ಸಚಿವರ ಅನುಮೋದನೆ ಪಡೆದು ಬಿಡುಗಡೆಗೆ ನಿರ್ದೇಶನ:ಎಲ್ಲ ಇಲಾಖೆಗಳು ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ/ಮಂಡಳಿ/ಪ್ರಾಧಿಕಾರಗಳ ಮುಂದುವರೆದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಲ್ಲುಗಳ ನೈಜತೆಯನ್ನು ಹಾಗೂ ನಿಯಮಾನುಸಾರ ಇರುವುದನ್ನು ಖಾತ್ರಿಪಡಿಸಿಕೊಂಡು ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸುತ್ತೋಲೆಯಲ್ಲಿ ನಿರ್ದೇಶನ ನೀಡಿದೆ.

ಜೊತೆಗೆ ಎಲ್ಲ ಶಾಸನಬದ್ಧ ಪಾವತಿಗಳನ್ನು ಹಾಗೂ ಬಾಹ್ಯ ನೆರವಿನ ಮುಂದುವರೆದ ಯೋಜನೆಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ/ಪಾವತಿಗಳನ್ನು ಮಾಡುವುದು. ಮುಂದುವರಿದ ಕಾರ್ಯಕ್ರಮ/ಯೋಜನೆಗಳಿಗೆ ಸಂಬಂಧಿಸಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಗಳ ಸಂಬಂಧ ಹಣ ಬಿಡುಗಡೆ ಮಾಡಬಹುದಾಗಿದೆ ಎಂದು ಹೊಸ ಸುತ್ತೋಲೆಯಲ್ಲಿ ಸರ್ಕಾರ ತಿಳಿಸಿದೆ.

ಹಿಂದಿನ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ಸರ್ಕಾರ ಆದೇಶ

ಇನ್ನು ಪ್ರಾರಂಭವಾಗದಿರುವ ಹಿಂದಿನ ಕಾಮಗಾರಿಗಳಿಗೆ 2023ರ ಮೇ 22 ರಂದು ಹಣ ಬಿಡುಗಡೆಗೆ ತಡೆ ನೀಡಿ ಹೊರಡಿಸಿರುವ ಸುತ್ತೋಲೆಯಲ್ಲಿನ ನಿರ್ದೇಶನಗಳು ಅನ್ವಯವಾಗುತ್ತವೆ ಎಂದು ಕೂಡ ಆದೇಶದಲ್ಲಿ ತಿಳಿಸಲಾಗಿದೆ.

ಹಳೆಯ ಆದೇಶದಲ್ಲಿ ಏನಿತ್ತು?:ಹಿಂದಿನ ಸರ್ಕಾರದ ಎಲ್ಲ ನಿಗಮ ಮಂಡಳಿಗಳ ನಾಮನಿರ್ದೇಶನಗಳನ್ನು ರದ್ದು ಪಡಿಸಲಾಗಿತ್ತು. ಜೊತೆಗೆ ಹಿಂದಿನ ಸರ್ಕಾರದ ಎಲ್ಲ ಇಲಾಖೆಗಳ ಮತ್ತು ನಿಗಮ ಮಂಡಳಿ ಪ್ರಾಧಿಕಾರಗಳ ಕಾಮಗಾರಿಗಳಿಗೆ ಮುಂದಿನ ಹಣ ಬಿಡುಗಡೆ, ಪಾವತಿಗಳನ್ನು ತಕ್ಷಣದಿಂದಲೇ ತಡೆ ಹಿಡಿಯುವಂತೆ ಹಾಗೂ ಇನ್ನೂ ಪ್ರಾರಂಭವಾಗದಿರುವ ಕಾಮಗಾರಿಗಳನ್ನು ತಡೆ ಹಿಡಿಯಲು ಸೂಚಿಸಿ ಆದೇಶಿಸಲಾಗಿತ್ತು.

ಬಾಕಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರ ಮನವಿ:ಹಿಂದಿನ ಕಾಮಗಾರಿಗಳ ಬಿಲ್ ತಡೆ ಹಿಡಿದು ಸರ್ಕಾರ ಆದೇಶಿಸಿದ್ದ ಬೆನ್ನಲ್ಲೇ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರಾಜ್ಯ ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ‌ ಮತ್ತು ಅವರ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿತ್ತು. ಹಿಂದಿನ ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಮನವಿ ಮಾಡಿತ್ತು.

ಕಾಮಗಾರಿಗಳ ಬಾಕಿ ಮೊತ್ತ ಬಿಡುಗಡೆಗೆ ತಡೆ ಹಿಡಿಯುವಂತೆ ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದ್ದು, ಇದರಿಂದ ಗುತ್ತಿಗೆದಾರರು ಆತಂಕಕ್ಕೊಳಗಾಗಿದ್ದಾರೆ. ಜೊತೆಗೆ ಗುತ್ತಿಗೆಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಕೆಂಪಣ್ಣ ನಿಯೋಗವು ಸಿಎಂ ಮುಂದೆ ಆತಂಕ ವ್ಯಕ್ತಪಡಿಸಿತ್ತು. ಆ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಬಾಕಿ ಬಿಲ್ ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಜೊತೆಗೆ ಕಮಿಷನ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕುತ್ತೇವೆ, ಸ್ಥಳೀಯ ಗುತ್ತಿಗೆದಾರರಿಗೆ ಯಾವುದೇ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಭರವಸೆ ಕೊಟ್ಟಿದ್ದರು.

ಎಷ್ಟು ಬಿಲ್ ಬಾಕಿ?: ನಗರೋತ್ಥಾನ ಯೋಜನೆಯಡಿ 1500 ಕೋಟಿ ಹಾಗೂ ಬಿಬಿಎಂಪಿ ಕಾಮಗಾರಿಗಳ 2000 ಕೋಟಿ ರೂ. ಬಾಕಿ ಇದ್ದು ಹಿಂದಿನ ಆದೇಶ ಪರಿಶೀಲಿಸಿ, ಹಣ ಬಿಡುಗಡೆ ಮಾಡುವಂತೆ ಸಿಎಂಗೆ ಕೆಂಪಣ್ಣ ಮನವಿ ಮಾಡಿದ್ದರು.

ಇದನ್ನೂ ಓದಿ: ಗುತ್ತಿಗೆದಾರರ ನಿಯೋಗದಿಂದ ಸಿಎಂ ಭೇಟಿ.. ಈಗಿನ ಸಚಿವ, ಶಾಸಕರು ಕಮಿಷನ್ ಕೇಳಿದರೆ ಅದನ್ನೂ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ

Last Updated : Jun 29, 2023, 7:51 AM IST

ABOUT THE AUTHOR

...view details