ಬೆಂಗಳೂರು:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 2023 ಕಾಂಗ್ರೆಸ್ಗೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ತಂದುಕೊಟ್ಟ ಶುಭ ವರ್ಷ. ಬಹುಮತದೊಂದಿಗೆ ರಾಜ್ಯದ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರದ ಮೊದಲ ಆದ್ಯತೆ ಆಗಿದ್ದು ಪಂಚ ಗ್ಯಾರಂಟಿಗಳ ಅನುಷ್ಠಾನ. ಏಳು ತಿಂಗಳ ಅಧಿಕಾರಾವಧಿಯಲ್ಲಿ ಕಠಿಣ ಸವಾಲುಗಳ ಮಧ್ಯೆ ಸರ್ಕಾರಕ್ಕೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.
ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆಗೂ ಮೊದಲು ಆಶ್ವಾಸನೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಯಿತು. ಸರ್ಕಾರ ಅಧಿಕಾರಕ್ಕೆ ಬಂದ ಮೂರು ವಾರಗಳಲ್ಲಿಯೇ ಒಂದೊಂದಾಗಿ ಗ್ಯಾರಂಟಿ ಯೋಜನೆಗಳ ಜಾರಿ ಪ್ರಾರಂಭಿಸಲಾಯಿತು. ಆದರೆ ಈ ಮಧ್ಯೆ ತೀವ್ರ ಬರ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಯಿತು.
ಅನುದಾನ ಹೊಂದಾಣಿಕೆಯ ಬೃಹತ್ ಸವಾಲು: ಪಂಚ ಗ್ಯಾರಂಟಿ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಎದುರಾಗಿದ್ದು ಅನುದಾನ. ಪಂಚ ಗ್ಯಾರಂಟಿಗಳಿಗೆ ವಾರ್ಷಿಕ 40,000 ಕೋಟಿ ರೂ. ಅನುದಾನ ಬೇಕಾಗಿತ್ತು. ಇಷ್ಟು ದೊಡ್ಡ ಪ್ರಮಾಣದ ಅನುದಾನ ಸಂಗ್ರಹ ಸರ್ಕಾರಕ್ಕೆ ಸವಾಲಾಗಿತ್ತು. ಆದರೂ ಕಸರತ್ತು ನಡೆಸಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ.
ಶಕ್ತಿ ಯೋಜನೆ ವೆಚ್ಚ:ಸಿಎಂ ಸಿದ್ದರಾಮಯ್ಯ ಅವರು ಜೂನ್ 11ಕ್ಕೆ ಪಂಚ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಮೊದಲಿಗೆ ಅನುಷ್ಠಾನ ಮಾಡಿದರು. ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟ, ಅನುದಾನ ಕೊರತೆಯ ಸವಾಲಿನ ಮಧ್ಯೆ ಯೋಜನೆ ಜಾರಿಗೊಳಿಸಲಾಯಿತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿʼ ಯೋಜನೆ ಪ್ರತಿದಿನ ಸರಾಸರಿ
50 ರಿಂದ 60 ಲಕ್ಷ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಡಿಸೆಂಬರ್ 22ರವರೆಗೆ ವರೆಗೆ ಸುಮಾರು 119.64 ಕೋಟಿ ಮಹಿಳೆಯರು ಉಚಿತವಾಗಿ ಶಕ್ತಿಯಡಿ ಪ್ರಯಾಣಿಸಿದ್ದಾರೆ. ಯೋಜನೆ ಜಾರಿಯಾದಾಗಿನಿಂದ ಡಿಸೆಂಬರ್ 22ರವರೆಗೆ ಸುಮಾರು 2,853.60 ಕೋಟಿ ರೂ. ಉಚಿತ ಟಿಕೆಟ್ ಪ್ರಯಾಣ ಮೌಲ್ಯದ ವೆಚ್ಚ ಆಗಿದೆ. 2023-24ಸಾಲಿನ ಆರ್ಥಿಕ ವರ್ಷಕ್ಕೆ ಶಕ್ತಿ ಯೋಜನೆಗಾಗಿ 2,800 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಒಟ್ಟು ವೆಚ್ಚ ಬಜೆಟ್ ಅನುದಾನವಾದ 2,800 ಕೋಟಿಯ ಗಡಿ ದಾಟಿದೆ.
ಗೃಹ ಜ್ಯೋತಿ ಯೋಜನೆ ಜಾರಿ:200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜುಲೈ 1 ರಿಂದ ಜಾರಿಗೆ ಬಂದಿದ್ದು, ಆಗಸ್ಟ್ 1 ರ ಬಿಲ್‍ನಿಂದ ಗ್ರಾಹಕರಿಗೆ ಸೌಲಭ್ಯ ದೊರೆಯುತ್ತಿದೆ. ಸುಮಾರು 2 ಕೋಟಿ ಗ್ರಾಹಕರಿಗೆ ಈ ಯೋಜನೆಯಿಂದ ಅನುಕೂಲವಾಗಿದೆ. ಐದು ಎಸ್ಕಾಂಗಳು ತನ್ನ ಗೃಹ ಬಳಕೆಯ ಗ್ರಾಹಕರುಗಳಿಗೆ ಗೃಹ ಜ್ಯೋತಿ ಉಚಿತ ವಿದ್ಯುತ್ ಪೂರೈಸುತ್ತಿದೆ. ಸರಾಸರಿ ಆಧಾರದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮೂರು ತಿಂಗಳಲ್ಲಿ ಗೃಹ ಜ್ಯೋತಿಯಡಿ ಒಟ್ಟು 2,125 ಕೋಟಿ ರೂ. ರಷ್ಟು ಉಚಿತ ವಿದ್ಯುತ್ ಬಳಸಿದ್ದಾರೆ. ಸುಮಾರು 4.12 ಕೋಟಿ ಗೃಹ ಬಳಕೆಯ ವಿದ್ಯುತ್ ಬಳಕೆದಾರರು ಗೃಹ ಜ್ಯೋತಿಯಡಿ ವಿದ್ಯುತ್ ಬಳಸಿದ್ದಾರೆ. ಆ ಮೂಲಕ ಒಟ್ಟು 747 ಕೋಟಿ ರೂ.ದಷ್ಟು ಉಚಿತ ವಿದ್ಯುತ್ ನೀಡಲಾಗಿದೆ. ಗೃಹ ಜ್ಯೋತಿಗಾಗಿ 2023-24ರಲ್ಲಿ 9,000 ಕೋಟಿ ರೂ.ಗಳಷ್ಟು ಅನುದಾನ ಮೀಸಲಿಡಲಾಗಿದೆ.