ಬೆಂಗಳೂರು : ಕೃಷಿ ಉತ್ಪನ್ನಗಳ ಮುಕ್ತ ಮಾರುಕಟ್ಟೆ ಮಾರಾಟ ಅವಕಾಶ ಕಲ್ಪಿಸಿ ಬಿಜೆಪಿ ಸರ್ಕಾರ ಮಾಡಿದ್ದ ನಿರ್ಧಾರ ಇದೇ ಅಧಿವೇಶನದಲ್ಲಿ ರದ್ದಾಗಲಿದೆ. ವಿಧಾನಸಭೆಯಲ್ಲಿ ಇಂದು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿಧೇಯಕ ಮಂಡನೆಯಾಗಿದ್ದು, 1966ರ ಮೂಲ 'ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ, 2020ರಲ್ಲಿ ತಿದ್ದುಪಡಿ ತಂದಿದ್ದ ಸರ್ಕಾರ ಎಲ್ಲಿ ಬೇಕಾದರೂ ತಮ್ಮ ಉತ್ಪನ್ನ ಮಾರಲು ರೈತರಿಗೆ ಅವಕಾಶ ಕಲ್ಪಿಸಿತ್ತು. 1966ರ ಕಾಯ್ದೆಯಲ್ಲಿ ಎಪಿಎಂಸಿ ಹೊರಗೆ ಮಾರಲು ರೈತರಿಗೆ ಅವಕಾಶ ಇರಲಿಲ್ಲ.
ಬಿಜೆಪಿ ನಿರ್ಧಾರದಿಂದ ರೈತರು ಮತ್ತು ಎಪಿಎಂಸಿ ಎರಡಕ್ಕೂ ನಷ್ಟ. ಅಲ್ಲದೇ ಇದು ಒಟ್ಟಾರೆ ಕೃಷಿ ವಲಯಕ್ಕೆ ಮಾರಕ ಎಂಬುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸಚಿವರಾದ ದಿನದಿಂದ ಪ್ರತಿಪಾದಿಸುತ್ತಲೇ ಇದ್ದರು. ಇದರ ತಾರ್ಕಿಕ ಅಂತ್ಯವಾಗಿ ಈಗ ಇನ್ನೊಂದು ತಿದ್ದುಪಡಿಯ ಮೂಲಕ ಹಿಂದಿನ ಸರ್ಕಾರದ ನಿರ್ಧಾರಕ್ಕೆ ಕೊಕ್ಕೆ ಹಾಕಿ, ಮೂಲ ಕಾಯ್ದೆಯ ಸ್ವರೂಪವನ್ನು ಮರಳಿ ತರಲು ಮುಂದಾಗಿದ್ದಾರೆ.
2020ರ ಮುಕ್ತ ಮಾರುಕಟ್ಟೆ ಪರಿಕಲ್ಪನೆ ನಿರ್ಧಾರ ರೈತರು ಮತ್ತು ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ನಿಂದ ತೀವ್ರ ಟೀಕೆಗೆ ಒಳಗಾಗಿತ್ತು. 'ಎಪಿಎಂಸಿ ಪ್ರಾಂಗಣದ ಹೊರಗೂ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶ ನೀಡಿದ್ದರಿಂದ, ರೈತರು ಸೂಕ್ತ ಬೆಲೆ ಸಿಗದೇ ಮೋಸ ಹೋಗುತ್ತಿದ್ದರು. ರಾಜ್ಯದ ಬೇರೆ ಬೇರೆ ಎಪಿಎಂಸಿಗಳಲ್ಲಿನ ಧಾರಣೆ ಗೊತ್ತಾಗದೇ, ಮುಕ್ತ ಮಾರುಕಟ್ಟೆಯಲ್ಲಿ ನಿರ್ಧಾರವಾದ ದರಗಳಿಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದರು.
ಮೊದಲ ಮಹತ್ವದ ನಿರ್ಧಾರ: 'ಜೊತೆಗೆ ತಮಗೆ ಆದ ಅನ್ಯಾಯದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೃಷಿಕರಿಗೆ ಅವಕಾಶ ಇರಲಿಲ್ಲ. ಕೃಷಿ ಆವರ್ತ ನಿಧಿಗೆ ಶೇಕಡಾ 50ರಷ್ಟು (60 ಕೋಟಿ) ತೆರಿಗೆ ಹಣ ಕಡಿಮೆಯಾಯಿತು. ಸರ್ಕಾರಕ್ಕೆ ಕೃಷಿ ಬೆಲೆ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಹಿನ್ನಡೆಯಾಗುತ್ತಿತ್ತು. ಆದ್ದರಿಂದ ಮುಕ್ತ ಮಾರುಕಟ್ಟೆ ಪರಿಕಲ್ಪನೆ ಹಿಂಪಡೆದು ಮತ್ತೊಮ್ಮೆ, ಮೂಲ ಕಾಯ್ದೆಯ ಆಶಯದಂತೆ ಎಪಿಎಂಸಿಯಲ್ಲಿ ಮಾತ್ರ ಮಾರಬೇಕು ಎನ್ನುವ ನಿಬಂಧನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಮಂಡಿಸಿರುವ ತಿದ್ದುಪಡಿ ವಿಧೇಯಕದ ಪ್ರಸ್ತಾಪದಲ್ಲಿ ಹೇಳಲಾಗಿದೆ. ಮುಂದಿನ ವಾರ ಇದು ಚರ್ಚೆಯಾಗಿ ಅಂಗೀಕಾರವಾಗಲಿದೆ. ಬಿಜೆಪಿ ಸರ್ಕಾರದ ನಿರ್ಧಾರಗಳನ್ನು ಕೈಬಿಡುವ ದಿಸೆಯಲ್ಲಿ ನೂತನ ಸರ್ಕಾರ ತೆಗೆದುಕೊಂಡ ಮೊದಲ ಮಹತ್ವದ ನಿರ್ಧಾರ ಇದಾಗಿದೆ.