ಬೆಂಗಳೂರು:ರಾಜ್ಯ ಹಾಗೂ ದೇಶದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಬರಲಿ ಎನ್ನುವುದು ನಮ್ಮ ಆಶಯ ಎಂದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಖರ್ಗೆಗೆ ಶುಭಕೋರಿದ ಪರಮೇಶ್ವರ್ :ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಅವರು ಭೇಟಿ ಮಾಡಿ, ಹೊಸ ವರ್ಷದ ಶುಭಾಶಯ ಕೋರಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭ ಕೋರಲು ಬಂದಿದ್ದೇನೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಉಜ್ವಲವಾಗಿ ಬೆಳೆಯಲಿ. ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲಿ ಎಂದು ನಾವು ಆಶಿಸುತ್ತೇವೆ. ದೇಶದಲ್ಲಿಯೂ ನಮ್ಮ ಸರ್ಕಾರ ಬರಲಿ ಎಂದು ಆಶಿಸುತ್ತೇವೆ ಎಂದರು.
ಇವ್ರು ಏನೇ ಮಾಡಿದರೂ ಕೂಡ 50% ಮೀರಿ ಮೀಸಲಾತಿ ಕೊಡುವುದು ಸಾಧ್ಯವಿಲ್ಲ ಎಂದು ಕಾನೂನಿನಲ್ಲಿದೆ. ಜೊತೆಗೆ ಕೇಂದ್ರದ ಸಚಿವರೂ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಎಸ್ಸಿ ಮತ್ತು ಎಸ್ಟಿ, ಲಿಂಗಾಯತ, ಒಕ್ಕಲಿಗ ಮೀಸಲಾತಿ ಹೆಚ್ಚಳ ಕೂಡ ಮಾಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ಚುನಾವಣೆ ಬರುತ್ತಿರುವುದರಿಂದ ಇದನ್ನು ಮಾಡಿದ್ದಾರೆ. ಇದು ಆಗಲ್ಲ, ಚುನಾವಣಾ ವಿಚಾರಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ನಾವು ಜನರಿಗೆ ಈ ಬಗ್ಗೆ ತಿಳಿಸುತ್ತೇವೆ. 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಲು ಅಷ್ಟು ಸುಲಭವಾಗಿ ಸಾಧ್ಯವಾ? ಇದೆಲ್ಲವನ್ನೂ ನಾವು ಜನರಿಗೆ ತಿಳಿಸುತ್ತೇವೆ ಎಂದು ಹೇಳಿದರು.