ಬೆಂಗಳೂರು:''ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಲೋಕಸಭಾ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದೆ. ಆದರೆ, ಇದರಲ್ಲಿ ಸಫಲರಾಗಲ್ಲ. ಇದು ನುಡಿದಂತೆ ನಡೆದ ಸರ್ಕಾರವಲ್ಲ, ಎಡವುತ್ತಿರುವ ಸರ್ಕಾರವಾಗಿದೆ. ಇದನ್ನು ಮತದಾರರು ಲೋಕಸಭಾ ಚುನಾವಣೆಯಲ್ಲಿ ತೋರಿಸಲಿದ್ದಾರೆ'' ಎಂದು ಕಾಂಗ್ರೆಸ್ ವೈಫಲ್ಯದ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಬರಗಾಲದ ಈ ಸಂದರ್ಭದಲ್ಲಿ ಅತ್ಯಂತ ತುರ್ತಾಗಿ ತೀರ್ಮಾನ ಕೈಗೊಂಡು ಮುಂದುವರೆಯಬೇಕಿದ್ದ ರಾಜ್ಯ ಸರ್ಕಾರಕ್ಕೆ ಮಂಪರು ಕವಿದಿದೆ. ಆಮೆ ನಡಿಗೆಯಲ್ಲಿ ಸರ್ಕಾರ ಸಾಗುತ್ತಿದೆ. ರೈತರು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗಲಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವಂತೆ ಬರ ಪರಿಸ್ಥಿತಿ ಕುರಿತು ಸಾಕಷ್ಟು ಸಮೀಕ್ಷೆ ನಡೆದಿದೆ. ಮಾಧ್ಯಮಗಳಲ್ಲೂ ವರದಿಗಳು ಬಂದಿವೆ. ಆದರೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ ರೋಮ್ ಹೊತ್ತಿ ಉರಿಯುವಾಗ ದೊರೆ ನಿರೋ ಪಿಟೀಲು ಬಾರಿಸುತ್ತಿದ್ದನಂತೆ. ಅದೇ ರೀತಿ ಸರ್ಕಾರ ನಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಅವರು ರೈತರು, ಜನರ ಸಂಕಷ್ಟಕ್ಕೆ ಸ್ಪಂದನೆ ಮಾಡಬೇಕು. ಆದ್ರೆ ಹಾಗೆ ಅನ್ನಿಸುತ್ತಿಲ್ಲ, ಅದರ ಬದಲಾಗಿ ದುಂದು ವೆಚ್ಚ, ಗ್ಯಾರಂಟಿ ಜಾತ್ರೆ ಮಾಡುತ್ತಿದ್ದಾರೆ. ಕೇಂದ್ರದ ನಾಯಕರ ಕರೆಸಿ ಜಾತ್ರೆ ಮಾಡುತ್ತಿದ್ದಾರೆ. ಮುಂಗಾರು ವಿಫಲತೆಯಿಂದ ಉಂಟಾಗುವ ಪರಿಸ್ಥಿತಿ ಬಗ್ಗೆ ಕಾಲಾನುಸಾರ ಹವಾಮಾನ ತಜ್ಞರು ಎಚ್ಚರಿಸಿಕೊಂಡೇ ಬಂದರೂ ಕಿವುಡ ಸರ್ಕಾರ ಇದನ್ನು ಗಣನೆಗೆ ಪಡೆಯದೇ ರೈತ ವಿರೋಧಿ, ಜನ ವಿರೋಧಿ ನೀತಿಯನ್ನು ಅಳವಡಿಸಿಕೊಂಡಿದೆ'' ಎಂದು ಆರೋಪಿಸಿದರು.
''ಸರ್ಕಾರ ಮತ್ತು ಸಚಿವರು ಬರ ಪರಿಸ್ಥಿತಿ ಹಗುರವಾಗಿ ಪರಿಗಣಿಸಿದ್ದಾರೆ. ಹೆಚ್ಚು ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಈ ಸರ್ಕಾರದ ಸಚಿವರೇ ಹೇಳುತ್ತಿದ್ದಾರೆ. ಕೂಡಲೇ ಆ ಸಚಿವರು ತಕ್ಷಣ ನಾಡಿನ ರೈತರ ಕ್ಷಮೆ ಯಾಚಿಸಬೇಕು'' ಎಂದು ಆಗ್ರಹಿಸಿದರು. ''ಒಂದು ಕಡೆ ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಪ್ರತಿ ಹಂತದಲ್ಲೂ ಕೇಂದ್ರವನ್ನು ದೂರುತ್ತಿದೆ. ಅಕ್ಕಿ ವಿಚಾರದಲ್ಲೂ ಮೋದಿ ಟೀಕಿಸಿದ್ದರು. ಈಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತದೆ. ಹಾಗಾಗಿ ಬಹಳ ಚಾಲಾಕಿನಿಂದ ಕೇಂದ್ರಕ್ಕೆ ಪತ್ರ ಬರೆದು ಬರದ ಮಾನದಂಡ ಸಡಿಲ ಮಾಡಿ ಎಂದು ಮನವಿ ಮಾಡಿದ್ದಾರೆ. ಇದರ ಹಿಂದೆ ದುರುದ್ದೇಶ ಅಡಗಿದೆ. ಗ್ಯಾರಂಟಿ ಪೂರ್ಣ ಕಷ್ಟವಾಗಿದೆ. ಸರ್ಕಾರಿ ನೌಕರರಿಗೆ ವೇತನ ಕೊಡಲು ಆಗುತ್ತಿಲ್ಲ. ಅಕ್ಕಿ ಬದಲು ಹಣ ನೀಡಿಲ್ಲ, ಈಗ ಬರದ ಮಾನದಂಡ ಸಡಿಲಿಕೆಗೆ ಪತ್ರ ಬರೆದು ಕೈಕಟ್ಟಿ ಕುಳಿತುಕೊಂಡಿದ್ದಾರೆ'' ಎಂದು ಕಿಡಿಕಾರಿದರು.
''ಸಂಕಷ್ಟಕ್ಕೆ ಸಿಲುಕಿರುವ ರೈತರ ಬರಪೀಡಿತ ತಾಲ್ಲೂಕು ಘೋಷಣೆ ನಿರೀಕ್ಷೆಯಲ್ಲಿದ್ದರೆ, ಸಚಿವರು ಅದನ್ನು ಮುಂದೂಡಿದ್ದಾರೆ. ಮತ್ತೆ ಸಮೀಕ್ಷೆ ಮಾಡಬೇಕು ಸಮಯ ಬೇಕು ಎನ್ನುತ್ತಿದ್ದಾರೆ. ಗ್ಯಾರಂಟಿ ಜಾತ್ರೆಗೆ ಸಮಯ ಇದೆ, ಇದಕ್ಕೆ ಇಲ್ಲವಾ? ರೈತರ ಸಮಸ್ಯೆಗೆ ಸ್ಪಂದಿಸುವ ಯಾವುದೇ ಇಚ್ಛೆ ಈ ಸರ್ಕಾರಕ್ಕೆ ಇಲ್ಲ. ಇನ್ನು ಯಾವ ಕಾಲಕ್ಕೆ ಬರ ಪ್ರದೇಶ ಘೋಷಣೆ ಮಾಡುತ್ತೀರಿ? ನೀವು ಘೋಷಿಸಿದ ನಂತರ ಕೇಂದ್ರದ ತಂಡ ಬಂದು ಸಮೀಕ್ಷೆ ನಡೆಸಬೇಕು. ಆ ನಂತರ ವರದಿ ಸಲ್ಲಿಸಿ ಪರಿಹಾರ ಬರಬೇಕು. ನೀವೇ ತಡ ಮಾಡಿ ಕೇಂದ್ರ ಪರಿಹಾರ ಕೊಟ್ಟಿಲ್ಲ ಎಂದು ಮತ್ತೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ಈ ಸರ್ಕಾರ ಮುಂದಾಗಿದೆ'' ಎಂದು ಟೀಕಿಸಿದರು.
''ಸರ್ಕಾರ ಬರುವ ಮೊದಲು ಮೇಕೆದಾಟು ಪಾದಯಾತ್ರೆಯ ನಾಟಕ ಮಾಡಿದಿರಿ. ಈಗ ಬಜೆಟ್ ನಲ್ಲಿ ಮೇಕೆದಾಟು ಯೋಜನೆಗೆ ಎಷ್ಟು ಹಣ ಮೀಸಲಿಟಗಟಿದ್ದೀರಿ? ಕಾವೇರಿ ಹೋರಾಟಗಾರರ ದನಿಯನ್ನು ಹತ್ತಿಕ್ಕುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಕನ್ನಡ ಪರ ಹೋರಾಟಗಾರರನ್ನೂ ಇಷ್ಟು ದಿನ ಎಲ್ಲಿದ್ದರು ಎನ್ನುತ್ತಿದ್ದಾರೆ. ಆ ಮೂಲಕ ಹೋರಾಟ ಹತ್ತಿಕ್ಕುತ್ತಿದ್ದಾರೆ'' ಎಂದರು. ''ಲೋಡ್ ಶೆಡ್ಡಿಂಗ್ ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ ನನ್ನದೇ ಶಿಕಾರಿಪುರ ಕ್ಷೇತ್ರದಲ್ಲಿ 40 ಸಾವಿರ ಪಂಪ್ ಸೆಟ್ ಇವೆ. ದಿನಕ್ಕೆ ಒಂದೆರಡು ಗಂಟೆ ಮಾತ್ರ ವಿದ್ಯುತ್ ಸಿಗುತ್ತಿದೆ. ಇದರಿಂದ ರೈತರು ಹೊಲಕ್ಕೆ ನೀರು ಹರಿಸಲು ವಿದ್ಯುತ್ ಇಲ್ಲದಂತಾಗಿದೆ. ಇದಕ್ಕೆ ಲೋಡ್ ಶೆಡ್ಡಿಂಗ್ ಅನಧಿಕೃತ ಜಾರಿಯಾಗಿರುವುದೇ ಕಾರಣ, ಇದು ಖಂಡನೀಯ'' ಎಂದರು.