ಬೆಂಗಳೂರು: ಸಚಿವ ಸಂಪುಟಕ್ಕೆ ಮಾತ್ರವಲ್ಲ ಇಡೀ ಸರ್ಕಾರಕ್ಕೆ ಸೂಕ್ತ ಸರ್ಜರಿ ನಡೆಯಬೇಕಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಗೆ ಜನಪರ ಆಡಳಿತ ನೀಡುವುದಕ್ಕಿಂತ ಚುನಾವಣೆ ದೃಷ್ಟಿಕೋನವೇ ಮುಖ್ಯ. ಸಂಪುಟಕ್ಕೆ ಮಾತ್ರವಲ್ಲ, ಐಸಿಯುನಲ್ಲಿರುವ ಇಡೀ ಸರ್ಕಾರಕ್ಕೇ ಸರ್ಜರಿ ಮಾಡಬೇಕಿದೆ. ಯಾವ ಸರ್ಜರಿ ಮಾಡಿದರೂ, ಎಷ್ಟೇ ಡಿಸಿಎಂ ಹುದ್ದೆ ಸೃಷ್ಟಿಸಿದರೂ ತಳ್ಳಿಕೊಂಡು ಹೋಗುತ್ತಿರುವ ಸರ್ಕಾರದ ಇಂಜಿನ್ ಸ್ಟಾರ್ಟ್ ಮಾಡಲಾಗದು. ಮ್ಯಾನೇಜ್ಮೆಂಟ್ ಸರ್ಕಾರ ಟೇಕಾಫ್ ಆಗಲಾರದು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಶೇ. 40ರಷ್ಟು ರೋಲ್ಕಾಲ್ ಸರ್ಕಾರದಲ್ಲಿ 100% ಗೋಲ್ಮಾಲ್ ನಡೆಯುವುದು ಸಾಮಾನ್ಯವಾಗಿದೆ. ಕಾನ್ಸ್ಟೇಟೆಬಲ್ಗಳ ಪಾಲಿನ ಅನ್ನ ನೀರಿನ ಭತ್ಯೆಗಳನ್ನು ಅಧಿಕಾರಿಗಳು ಲೂಟಿ ಮಾಡುತ್ತಿರುವುದು ಗೃಹಸಚಿವರ ಗಮನಕ್ಕೆ ಬರಲಿಲ್ಲವೇ?. ಪಿಎಸ್ಐ ನೇಮಕದಿಂದ ಹಿಡಿದು ಭತ್ಯೆ ಲೂಟಿಯವರೆಗೆ ಗೃಹ ಇಲಾಖೆಯ ಎಲ್ಲಾ ಅಕ್ರಮಗಳಿಗೂ ಗೃಹಸಚಿವರ ಅಸಾಮರ್ಥ್ಯ, ಭ್ರಷ್ಟತನವೇ ಕಾರಣ ಎಂದು ಕಿಡಿಕಾರಿದೆ.
ಬಿಜೆಪಿ ಭ್ರಷ್ಟೋತ್ಸವ ಜಾತ್ರೆ:ಶೇ.40ರಷ್ಟು ಪರ್ಸಟೇಂಜ್ ಸರ್ಕಾರದಲ್ಲಿ ನಡೆದ ಪಿಎಸ್ಐ ಹಗರಣದ ಒಳಸುಳಿಗಳು ಬಿಡಿಸಿದಷ್ಟೂ ಹೊರಬರುತ್ತಿವೆ. ಇಂತಸೊಂದು ಬೃಹತ್ ಅಕ್ರಮ ನಡೆದೇ ಇಲ್ಲ ಎಂದು ಸದನದಲ್ಲಿ ನಿರಾಕರಿಸಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಅವರು, ಈ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಬಿಜೆಪಿ ಭ್ರಷ್ಟೋತ್ಸವ ಜಾತ್ರೆಯಲ್ಲಿ ನೂರಾರು ಹಗರಣಗಳ ಮೆರವಣಿಗೆ ಎಂದಿದೆ.
ಬಿಜೆಪಿ ಡ್ರಗ್ ಡೀಲರ್: ಯುವಕರಿಗೆ ಉದ್ಯೋಗ ಕೊಡಲಾಗದ ಬಿಜೆಪಿ ಸರ್ಕಾರ ಡ್ರಗ್ಸ್ ನೀಡಿ ಸಮಾಧಾನಪಡಿಸಲು ಹೊರಟಿದೆಯೇ? ಗುಜರಾತಿನ ಬಂದರುಗಳಲ್ಲಿ ಹತ್ತಾರು ಬಾರಿ ಸಾವಿರಾರು ಕೋಟಿ ಮೊತ್ತದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಹೀಗಿದ್ದೂ ದೇಶದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟುವ ಯಾವ ಕ್ರಮಗಳನ್ನೂ ಸರ್ಕಾರ ಕೈಗೊಳ್ಳದಿರುವುದು ಏಕೆ? ಎಂದು ಬಿಜೆಪಿ ಡ್ರಗ್ ಡೀಲರ್ಸ್ ಎಂಬ ಟ್ಯಾಗ್ ಲೈನ್ ಅಡಿ ಟ್ವೀಟ್ ಮಾಡಿದೆ.