ಬೆಂಗಳೂರು :ಕಳೆದ ವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಉದ್ಯಮಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ಸಿಎಂ ಪುತ್ರ ಭಾಗಿಯಾಗಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಟ್ವೀಟ್ ಮೂಲಕ ತನ್ನ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಉದ್ಯಮಿಗಳೊಂದಿಗಿನ ಸರ್ಕಾರಿ ಸಭೆಯಲ್ಲಿ ನಿಮ್ಮ ಪುತ್ರನದ್ದೇನು ಪಾತ್ರ ಬಸವರಾಜ್ ಬೊಮ್ಮಾಯಿ ಅವರೇ?, ಕುಟುಂಬ ರಾಜಕಾರಣದ ಪರಂಪರೆ ಮುಂದುವರೆಸುವ ಇರಾದೆಯೇ? ಬಿ ಎಸ್ ಯಡಿಯೂರಪ್ಪ ಅವರ ಅಧಿಕಾರದಲ್ಲಿ ಬಿ ವೈ ವಿಜಯೇಂದ್ರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿದ್ದರು. ಈಗ ತಾವೂ ಅದೇ ದಾರಿಯಲ್ಲಿ ಹೊರಟಿರುವಿರಾ, ದೃತರಾಷ್ಟ್ರಪ್ರೇಮ ಒಳ್ಳೆಯದಲ್ಲ ಎಂದು ಸಲಹೆ ನೀಡಿದೆ.
ಕಳೆದ ವಾರ ಖಾಸಗಿ ಹೋಟೆಲ್ನಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಆಯೋಜಿಸಿದ್ದ ಔತಣಕೂಟದಲ್ಲಿ ಸಿಎಂ ಭಾಗಿಯಾಗಿ ಎರಡು ಗಂಟೆಗೂ ಹೆಚ್ಚು ಕಾಲ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಸಮಾರಂಭದ ಕೊನೆಯಲ್ಲಿ ತೆಗೆಸಿದ ಫೋಟೊದಲ್ಲಿ ಮುಖ್ಯಮಂತ್ರಿಯ ಪುತ್ರ ಸಹ ಇದ್ದು, ಈ ಚಿತ್ರವನ್ನು ಮುಂದಿಟ್ಟು ಕಾಂಗ್ರೆಸ್ ಸಿಎಂ ಹಾಗೂ ಬಿಜೆಪಿ ಸರ್ಕಾರದ ಕಾಲೆಳೆಯುವ ಕಾರ್ಯ ಮಾಡಿದೆ.
ಗೌರವಿಸುವ ಕಾರ್ಯ ಮಾಡಲಿ :ವಾಜಪೇಯಿಯವರು ವಿದೇಶಾಂಗ ಮಂತ್ರಿಯಾಗಿದ್ದಾಗ ಪಾರ್ಲಿಮೆಂಟ್‌ನ ಸೌತ್ ಬ್ಲಾಕ್ ಭಾಗದಲ್ಲಿ ನೆಹರೂರವರ ಭಾವಚಿತ್ರ ತೆಗೆದು ಹಾಕಿದ್ದನ್ನ ಪ್ರಶ್ನಿಸಿ ನೆಹರೂ ಫೋಟೋವನ್ನು ಮರು ಸ್ಥಾಪಿಸಿದ್ದರು. ಇದು ವಾಜಪೇಯಿ ನೆಹರು ಅವರನ್ನು ಗೌರವಿಸುತ್ತಿದ್ದ ರೀತಿ. ದ್ವೇಷ ರಾಜಕೀಯದ ರಾಜ್ಯ ಬಿಜೆಪಿ ವಾಜಪೇಯಿ ಅವರ ಈ ಆದರ್ಶ ಪಾಲಿಸುವ ಮೂಲಕ ಅವರನ್ನು ಗೌರವಿಸಲಿ ಎಂದು ಕಾಂಗ್ರೆಸ್ ತಿಳಿಸಿದೆ.
ದೇಶವನ್ನು ಆಳಿ, ತಮ್ಮದೇ ಆದ ಕೊಡುಗೆ ಕೊಟ್ಟವರು ನೆಹರೂ, ವಾಜಪೇಯಿ. ವಾಜಪೇಯಿ ಬೀಫ್ ತಿಂದಿದ್ದು ತಪ್ಪು, ಮದ್ಯಸೇವನೆ ಮಾಡಿದ್ದು ತಪ್ಪು, ಅಟಲ್‌ಗೂ, ಶ್ರೀಮತಿ ಕೌಲ್‌ಗೂ ಸಂಬಂಧವಿದ್ದಿದ್ದು ತಪ್ಪು ಎಂದು ನಿಮ್ಮಂತೆ ನಾವು ಹೇಳಲಿಕ್ಕಾಗುತ್ತದೆಯೇ ಸಿಟಿ ರವಿ ಅವರೇ?ಬಿಜೆಪಿಗೆ ಪ್ರಸ್ತುತ ವಿಷಯ ಚರ್ಚಿಸಲು ಧೈರ್ಯವಿಲ್ಲದೆ ಗತಿಸಿದವರಿಗೆ ಕೆಸರೆರಚುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.
ಲಾಕ್‌ಡೌನ್ ಬಿಡಿ ಲಸಿಕೆ ಕೊಡಿ ಅಭಿಯಾನ :ಲಾಕ್‌ಡೌನ್ ಬಿಡಿ ಲಸಿಕೆ ಕೊಡಿ ಅಭಿಯಾನ ಮೂಲಕ ಸರ್ಕಾರದ ವಿರುದ್ಧ ಚಾಟಿ ಬೀಸಿರುವ ಕಾಂಗ್ರೆಸ್, 3ನೇ ಅಲೆಯ ಬಗ್ಗೆ ಮುನ್ನೆಚ್ಚರಿಕೆ ಇತ್ತು. ಸರ್ವರಿಗೂ ಲಸಿಕೆ ನೀಡಬೇಕಿತ್ತು. ಕನಿಷ್ಠ 70% ಜನತೆಗೆ ಲಸಿಕೆ ನೀಡಿದ್ದಿದ್ದರೆ ಈಗ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ, ಲಾಕ್‌ಡೌನ್, ಕಠಿಣ ಕ್ರಮ ಮುಂತಾದ ಜನ ವಿರೋಧಿ ವರಸೆಗಳ ಅಗತ್ಯವಿತ್ತೆ ರಾಜ್ಯ ಬಿಜೆಪಿ ನಾಯಕರೇ? ಲಾಕ್‌ಡೌನ್ ಸೃಷ್ಟಿಸುವ ದುಷ್ಪರಿಣಾಮದ ಅರಿವಿದೆಯೇ? ಎಂದು ಕೇಳಿದೆ.
ಹಲವು ದೇಶಗಳು ತಮ್ಮ ದೇಶದ ಜನತೆಗೆ ಸಂಪೂರ್ಣ ಲಸಿಕೆ ನೀಡಿ ಕೋವಿಡ್ ನಿಯಮಗಳನ್ನು ರದ್ದುಗೊಳಿಸಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿವೆ. ಒಂದು ವರ್ಷ ಸಮಯಾವಕಾಶ ಇದ್ದರೂ ರಾಜ್ಯ ಬಿಜೆಪಿ ಸರ್ಕಾರ ಲಸಿಕೆ ನೀಡಲಾಗದೆ ಇನ್ನೂ ಸಹ ಲಾಕ್‌ಡೌನ್ ಮಾಡುವ ಬಗ್ಗೆಯೇ ಚರ್ಚೆಯಲ್ಲಿರುವುದು ವಿಪರ್ಯಾಸ. ಬಿಜೆಪಿಯ ವೈಫಲ್ಯ ರಾಜ್ಯಕ್ಕೆ ದೊಡ್ಡ ಮಾರಕವಾಗಲಿದೆ ಎಂದಿದೆ.