ಬೆಂಗಳೂರು: ಕೋವಿಡ್ ನಡುವೆಯೂ ಕಾಂಗ್ರೆಸ್ ಪದೇ ಪದೆ ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಇಂದು ಕೂಡ ಜೆಡಿಎಸ್ ಮುಖಂಡರೋರ್ವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಜನರ ನೂಕುನುಗ್ಗಲು ಸಾಮಾನ್ಯವಾಗಿತ್ತು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಅಕ್ಕಿ ಹಾಗೂ ಅವರ ಬೆಂಬಲಿಗರು ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಈ ಸಂದರ್ಭ ಅಕ್ಕಿ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಮತ್ತೊಮ್ಮೆ ಕೆಪಿಸಿಸಿ ಕಚೇರಿಯ ಸಭಾಂಗಣ ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್ ಕಾರ್ಯಕರ್ತರಿಂದ ತುಂಬಿ ತುಳುಕಿತು.
ಸಮಾರಂಭ ಆರಂಭವಾಗುತ್ತಿದ್ದಂತೆ ವೇದಿಕೆಯ ಮುಂಭಾಗ ಹಾಗೂ ವೇದಿಕೆಯ ಅಕ್ಕಪಕ್ಕದಲ್ಲಿ ಕಾಲಿಡಲೂ ಜಾಗವಿಲ್ಲದಂತೆ ಕಾರ್ಯಕರ್ತರು ತುಂಬಿಕೊಂಡರು. ಸಾಕಷ್ಟು ಮಂದಿ ಕೂರಲು ಜಾಗವಿಲ್ಲದೆ ನಿಂತೇ ಕಾರ್ಯಕ್ರಮ ವೀಕ್ಷಿಸಿದರು. ಸಮಾರಂಭದಲ್ಲಿ ಮಲ್ಲಿಕಾರ್ಜುನ ಅಕ್ಕಿ ಅವರಿಗೆ ಕಾಂಗ್ರೆಸ್ ಶಾಲು ಹೊದಿಸಿ, ಬಾವುಟ ನೀಡಿ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡರು. ಇದಾದ ಬಳಿಕ ಪ್ರತಿಯೊಬ್ಬ ಕಾರ್ಯಕರ್ತರಿಗೂ ಕಾಂಗ್ರೆಸ್ ಮುಖಂಡರು ಶಾಲು ಹೊದೆಸಿ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು.