ಕರ್ನಾಟಕ

karnataka

ETV Bharat / state

ಸಂಕ್ರಾಂತಿಯೊಳಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ: ಡಿಕೆಶಿ - D K Shivakumar meet mallikarjun kharge

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರು ನಿವಾಸಕ್ಕೆ ಭೇಟಿ ನೀಡಿದ್ದು, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

By

Published : Jan 1, 2023, 2:29 PM IST

ಬೆಂಗಳೂರು:ಸಂಕ್ರಾಂತಿ ಒಳಗಡೆ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸದಾಶಿವನಗರದಲ್ಲಿರುವ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಅವರು, ಹೊಸವರ್ಷದ ಶುಭಾಶಯ ತಿಳಿಸಿದ್ದಾರೆ. ಕುಟುಂಬ ಸಮೇತವಾಗಿ ತೆರಳಿದ ಡಿಕೆಶಿ, ಸಾಕಷ್ಟು ಸಮಯ ಖರ್ಗೆ ನಿವಾಸದಲ್ಲಿ ಚರ್ಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿ ಸಂದರ್ಭದಲ್ಲೇ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಸಾಕಷ್ಟು ವಿಚಾರಗಳ ಮೇಲೆ ಚರ್ಚೆ ನಡೆದಿದೆ ಎಂಬ ಮಾಹಿತಿ ಇದೆ.

ಈ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ. ನಾನು ಹೊಸ ವರ್ಷದ ಶುಭಾಶಯ ಕೋರಲು ಬಂದಿದ್ದೇನೆ. ನಾವೆಲ್ಲ ಒಟ್ಟಿಗೆ ದುಡಿದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಜನ ಬದಲಾವಣೆ ಬಯಸುತ್ತಿದ್ದಾರೆ. ಅದರಂತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅಭ್ಯರ್ಥಿಗಳ ಪಟ್ಟಿ ಕಳಿಸಲು ಗಡುವು ಕೊಟ್ಟಿದ್ದೆವು ಎಂದರು.

ಸಂಕ್ರಾಂತಿಯೊಳಗಡೆ ಮೊದಲ ಪಟ್ಟಿ ಬಿಡುಗಡೆ: ಇನ್ನು ಮೂರು ನಾಲ್ಕು ಜಿಲ್ಲೆಗಳಲ್ಲಿ ಮೀಟಿಂಗ್ ಆಗಿಲ್ಲ. 31 ರವರೆಗೆ ಲಿಸ್ಟ್ ಕಳಿಸಲು ಗಡುವು ಕೊಟ್ಟಿತ್ತು. ಇನ್ನು ಮೂರು ದಿನಗಳಲ್ಲಿ ಅವರು ಲಿಸ್ಟ್ ಕಳಿಸುತ್ತಾರೆ. ನಂತರ ಚುನಾವಣಾ ಸಮಿತಿ ಸಭೆ ನಡೆಯುತ್ತೆ. ಖರ್ಗೆ ಅವರ ಜೊತೆ ಮಾತನಾಡಿರುವ ವಿಚಾರಗಳನ್ನು ಡಿಸ್ ಕ್ಲೋಸ್ ಮಾಡೋಕೆ ಆಗೋದಿಲ್ಲ. ಸಂಕ್ರಾಂತಿಯೊಳಗಡೆ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಟಿಕೆಟ್​ಗಾಗಿ ಬಣಗಳ ನಡುವೆ ಫೈಟ್ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್​ನಲ್ಲಿ ಸ್ಪರ್ಧೆ ಇದೆ. ಸ್ಪರ್ಧೆ ಇರುವ ಕಡೆ ಯುದ್ದ ಆಗುತ್ತದೆ. ಯುದ್ದ ಆಗಬೇಕು, ಮೊದಲು ನಮ್ಮಲ್ಲಿ ಯುದ್ದ ಮಾಡಿಕೊಂಡು ನಂತರ ಬಿಜೆಪಿ ಅವರ ಮೇಲೆ ಯುದ್ದ ಮಾಡಬೇಕು. ನಮ್ಮಲ್ಲಿ ಯಾವ ಬಣಗಳೂ ಇಲ್ಲ. ಇರುವುದು ಒಂದೇ ಬಣ, ಅದು ಕಾಂಗ್ರೆಸ್ ಬಣ ಎನ್ನುವ ಮೂಲಕ ಟಿಕೆಟ್‌ಗಾಗಿ ನಡೆಯುತ್ತಿರುವ ಜಗಳವನ್ನೂ ಸಮರ್ಥಿಸಿಕೊಂಡರು.

ಬಸಣ್ಣ ಟೋಪಿ ಹಾಕಿದ್ರು:ಒಕ್ಕಲಿಗಹಾಗೂ ಪಂಚಮಸಾಲಿಗೆ ಮೀಸಲಾತಿ ವಿಚಾರ ಸರ್ಕಾರದ ವಿರುದ್ದ ಅಭಿನಯ ಮಾಡಿ ವ್ಯಂಗ್ಯವಾಡಿದ ಡಿ.ಕೆ.ಶಿವಕುಮಾರ್, ಪಂಚಮಸಾಲಿ ಸ್ವಾಮೀಜಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಹೇಗೆ ಮಾಡಿದಾರೆ ಅಂದ್ರೆ ತುಪ್ಪವನ್ನು ಮೊಣಕೈಗೂ ಸವರಿಲ್ಲ. ಮೂಗಿಗೂ ಸವರಿಲ್ಲ. ತಲೆ ಮೇಲೂ ತುಪ್ಪ ಸುರಿದುಬಿಟ್ರು, ಅದು ನಾಲಿಗೆಗೂ ಈಗ ಸಿಕ್ತಿಲ್ಲ. ನಾಲಿಗೆ ಹೀಗೆ ಮಾಡಿದ್ರೂ ತುಪ್ಪ ಸಿಗ್ತಿಲ್ಲ. ಏನ್ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ.

ಪಂಚಮಸಾಲಿ ಶಾಸಕರು ಸಚಿವರು ರಾಜೀನಾಮೆ ಕೊಡಬೇಕು. ಮಾನ ಮರ್ಯಾದೆ ಇದ್ರೆ ಅಶೋಕ್ ಕೂಡ ರಾಜೀನಾಮೆ ಕೊಟ್ಟು ಹೊರಗೆ ಬರಲಿ. ಒಕ್ಕಲಿಗ ಸ್ವಾಮಿಜಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಅವತ್ತು ಸಭೆಯಲ್ಲಿ ಇದೇ ಅಶೋಕ್ ಭರವಸೆ ಕೊಟ್ಟು ಹೋಗಿದ್ರು. ಈಗ ಹೋಗಿ ಕ್ಯಾಬಿನೆಟ್ ನಲ್ಲಿ ಪಕ್ಕದಲ್ಲಿ ಕೂತಿದ್ದಾರೆ. ಅಶೋಕ್ ಕೂಡ ರಾಜೀನಾಮೆ ಕೊಟ್ಟು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಒತ್ತಾಯಿಸಿದರು.

ಮರ್ಜ್​ ಮಾಡುವ ಅವಶ್ಯಕತೆ ಇಲ್ಲ: ಅಮುಲ್ ಹಾಗೂ ಕೆಎಮ್ ಎಫ್ ವಿಲೀನ ವಿಚಾರ ಮಾತನಾಡಿ, ಸೋಮಶೇಖರ್ ಮತ್ತು ಬೊಮ್ಮಾಯಿ ಅವರು ರೆಗ್ಯುಲೇಷಬ್ ಮೂವ್ ಮಾಡಲಿ ನೋಡೋಣ. ಆದರೆ ಇದು ನಮ್ಮ ರಾಜ್ಯದ ವಿಚಾರ. ಹಾಲು, ನೀರು, ಜನ ಇದು ನಮ್ಮ ಹಕ್ಕು ಇದು. ಕನಕಪುರದಲ್ಲಿ ಅಮುಲ್ ಗಿಂತ ದೊಡ್ಡದಿದೆ. ಹಾಸನದಲ್ಲೂ ಮಿಲ್ಕ್ ಫೆಡರೇಶನ್ ಚನ್ನಾಗಿದೆ. ನಮ್ಮದು ಲಾಭದಾಯಕವಾಗಿ ನಡೆಯುತ್ತಿದೆ. ರೈತರನ್ನು ಶಕ್ತಿಶಾಲಿಯಾಗಿ ಮಾಡಬೇಕು. ಯಾವ ರಾಜ್ಯದ ಯಾವ ಮಿಲ್ಕ್ ಯುನಿಯನ್ ಜೊತೆ ಮರ್ಜ್ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮಗೂ ಅವರಿಗೂ ವ್ಯತ್ಯಾಸ ಇದೆ: ಬಿಜೆಪಿ ಹಿಂದುತ್ವ ಕಾರ್ಡ್ ಪ್ಲೇ ಮಾಡಿರುವ ವಿಚಾರ ಮಾತನಾಡಿ, ನಮಗೂ ಅವರಿಗೂ ಇರೋ ವ್ಯತ್ಯಾಸ ಇಷ್ಟೆ. ಅವರು ಭಾವನೆ ಮೇಲೆ ಹೋಗ್ತಾರೆ, ನಾವು ಬದುಕಿನ ಮೇಲೆ ಹೋಗ್ತೀವಿ. ರೈತರ ಆದಾಯ ಡಬ್ಬಲ್ ಮಾಡ್ತೀವಿ ಅಂದ್ರು ಏನಾಯ್ತು? ಪ್ರತಿಯೊಂದು ಬೆಲೆ ಕೂಡ ಗಗನಕ್ಕೆ ಹೋಗ್ತಿದೆ. ದೊಡ್ಡ ಬ್ಯುಸಿನೆಸ್ ಮ್ಯಾನ್‌ಗಳನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಸಣ್ಣ ಬ್ಯುಸಿನೆಸ್ ಮ್ಯಾನ್‌ಗಳು, ಹೆಣ್ಣು ಮಕ್ಕಳು ಅವರ ವಿರೋಧ ಇದ್ದಾರೆ. ಒಂದು ಜೂಮ್ ಮೀಟಿಂಗ್ ಕೂಡ ನಾನು ಹೆಣ್ಣು ಮಕ್ಕಳ ಜೊತೆ ಇಟ್ಟಿದ್ದೀನಿ. ಅವರ ಅಭಿಪ್ರಾಯ ನಾನು ಕೇಳ್ತೀನಿ ಎಂದರು.

ಎಲ್ಲ ತರದ ಬದಲಾವಣೆ ಶಾಂತಿ ನೆಮ್ಮದಿ ಸಮೃದ್ದಿ ಸಿಗಲಿ ಅಂತ ತುಂಬು ಹೃದಯದಿಂದ ಹಾರೈಸುತ್ತೇನೆ. 2023 ರಾಜ್ಯಕ್ಕೆ ಬಂದ ಕಳಂಕ ತೊಲಗಿ ಬಲಿಷ್ಟ ಉತ್ತಮ ನವ ಕರ್ನಾಟಕ ಆಗಲಿ. ರಾಜ್ಯದ ಜನ ಬದಲಾವಣೆ ತರ್ತಾರೆ ಅಂತ ನಂಬಿಕೆ ಇದೆ. ಅಮಿತ್ ಶಾ ಎರಡು ದಿನಗಳ ಕಾಲ ಬಂದಿದ್ರು. ರಾಜ್ಯದ ಆಡಳಿತ ಬಗ್ಗೆ ಅವರಿಗೆ ಸಮಾಧಾನ ಇಲ್ಲ. ರಾಜ್ಯದ ಬಿಜೆಪಿ ನಾಯಕರ ಮುಂದಾಳತ್ವದಲ್ಲಿ ಚುನಾವಣೆಗೆ ಹೋದರೆ ನಾವು ಎದುರಿಸಲು ಸಾಧ್ಯವಿಲ್ಲ ಅಂತ ಅಮಿತ್ ಶಾ ಸತ್ಯ ನುಡಿದಿದ್ದಾರೆ.

ಇದನ್ನೂ ಓದಿ:ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು? ರಾಹುಲ್‌ ಗಾಂಧಿ ಬಗ್ಗೆ ನಿತೀಶ್ ಕುಮಾರ್ ಹೇಳಿದ್ದಿಷ್ಟು..

ಕಾಂಗ್ರೆಸ್ ಪಕ್ಷದ ಸಾಮೂಹಿಕ ನಾಯಕತ್ವ ಖರ್ಗೆ, ಸಿದ್ದರಾಮಯ್ಯ, ಡಿಕೆಶಿವಕುಮಾರ್, ಎಚ್ಕೆ ಪಾಟೀಲ್, ಪರಮೇಶ್ವರ ಸೇರಿ ಸಾಮೂಹಿಕ ನಾಯಕತ್ವವನ್ನು ಸೋಲಿಸಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ಮೋದಿ ಹೆಸರಿನೊಂದಿಗೆ ಪ್ರಚಾರ ಮಾಡ್ತಿದ್ದಾರೆ. 2023 ಕಾಂಗ್ರೆಸ್ ಅಧಿಕಾರದ ವರ್ಷವಾಗಲಿದೆ ಎಂದು ಡಿಕೆಶಿ ಭವಿಷ್ಯ ನುಡಿದರು.

ABOUT THE AUTHOR

...view details