ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು, ನಮ್ಮ ನಾಯಕರು ಹಾಗೂ ಹಿಂದೆ ನಮ್ಮ ಸರ್ಕಾರ ತಂದಿದ್ದ ಯೋಜನೆಗಳನ್ನು ವಿಫಲಗೊಳಿಸುವ ಹಾಗೂ ಯೋಜನೆಗಳಿಗೆ ಕೆಟ್ಟ ಹೆಸರು ತರುವ ಯತ್ನ ಮಾಡುತ್ತಿದೆ. ಇದೇ ಕಾರ್ಯ ಮುಂದುವರಿದರೆ ಅದನ್ನು ಪಕ್ಷ ಸಹಿಸುವುದಿಲ್ಲ ಎನ್ನುವ ಎಚ್ಚರಿಕೆ ಮಾತನ್ನು ಆಡಿದೆ.
ಸರಣಿ ಟ್ವೀಟ್ಗಳ ಮೂಲಕ ಪಕ್ಷದ ನಾಯಕರನ್ನು ಹಾಗೂ ಪಕ್ಷದ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸ್, ಇಂದಿರಾ ಕ್ಯಾಂಟೀನ್, ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ರುಚಿ ಮತ್ತು ಶುಚಿಯಾದ ಊಟ ಕೊಡುವ ಯೋಜನೆ. ಇಂತಹ ಯೋಜನೆ ನಿಲ್ಲದಂತೆ, ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಎಚ್ಚರಿಸಿದೆ.
ನಿನ್ನೆ ಪೌರಕಾರ್ಮಿಕರಿಗೆ ನೀಡಿದ ಊಟದಲ್ಲಿ ಹುಳು ಪತ್ತೆಯಾಗಿದೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆ ಕಾಂಗ್ರೆಸ್ ಈ ಟ್ವೀಟ್ ಮಾಡಿದೆ. ಇನ್ನೊಂದು ಟ್ವೀಟ್ನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಸಂಬಂಧ ಉತ್ತಮವಾಗಿದೆ. ಅದನ್ನು ಹಾಳುಮಾಡುವ ಯತ್ನ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿಚಾರವನ್ನು ಪ್ರಸ್ತಾಪಿಸಿ, ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಪ್ರಭಾವಿ ಮುಖಂಡರು. ಹಾಗೆಯೇ ಡಿಕೆ ಶಿವಕುಮಾರ್ ಅವರು ಕೂಡ ನಮ್ಮ ಪಕ್ಷದ ನಾಯಕರು. ಕಾಂಗ್ರೆಸ್ ನಾಯಕರ ಒಗ್ಗಟ್ಟು ಒಡೆಯುವಂತಹ ಕೆಲವು ಕೆಲಸಗಳು ನಡೆಯುತ್ತಲೇ ಇರುತ್ತವೆ. ಇದೆಲ್ಲದರ ನಡುವೆಯೂ ನಾಯಕರೆಲ್ಲರೂ ಒಗ್ಗಟ್ಟಾಗಿ ಮುಂದುವರೆಯುವುದಾಗಿ ತೀರ್ಮಾನ ಮಾಡಿದ್ದೇವೆ ಎಂದು ಹೇಳಿರುವ ಸಂದೇಶವನ್ನು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ತಮ್ಮ ನಾಯಕರನ್ನು ಸಮರ್ಥಿಸಿಕೊಂಡಿದೆ.
ಶತಾಯ ಗತಾಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ತೋರಿಸಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಉಪ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ನಾಯಕರಲ್ಲಿ ಒಗ್ಗಟ್ಟಿದೆ ಎನ್ನುವುದನ್ನು ತೋರಿಸಿಕೊಳ್ಳುವ ಮೂಲಕ ಕಾರ್ಯಕರ್ತರಿಗೆ ಧೈರ್ಯ ತುಂಬುವುದು ಕೂಡ ಪಕ್ಷಕ್ಕೆ ಈ ಸಂದರ್ಭ ಅನಿವಾರ್ಯವಾಗಿದೆ.