ಬೆಂಗಳೂರು :ಬಿಜೆಪಿ ಹೈಕಮಾಂಡ್ನಿಂದ ಬಿ ಎಸ್ ಯಡಿಯೂರಪ್ಪಗೆ ಅಪಮಾನ ಆಗಿದೆ ಎಂಬ ವಿಚಾರವನ್ನ ಮುಂದಿರಿಸಿ ಲಿಂಗಾಯತ ಸಮುದಾಯದ ಮತದಾರರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸಿದ್ದ ಕಾಂಗ್ರೆಸ್ಗೆ, ಬಸವರಾಜ್ ಬೊಮ್ಮಾಯಿ ಆಯ್ಕೆ ಭಾರಿ ಹಿನ್ನಡೆ ಉಂಟು ಮಾಡಲಿದೆ ಎಂಬ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗ್ತಿದೆ.
ನಾಲ್ಕು ದಶಕಕ್ಕಿಂತಲೂ ಹೆಚ್ಚು ಕಾಲ ಬಿಜೆಪಿ ಪಕ್ಷ ಕಟ್ಟಿ ದಕ್ಷಿಣದಲ್ಲಿ ಅಧಿಕಾರಕ್ಕೆ ತಂದ ಬಿ ಎಸ್ ಯಡಿಯೂರಪ್ಪಗೆ ಮೂರು ದಶಕಗಳಿಂದ ಲಿಂಗಾಯತ ಸಮುದಾಯದ ಬೇಷರತ್ ಬೆಂಬಲ ಲಭಿಸಿದೆ. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಂತೂ ಬಹುತೇಕ ಲಿಂಗಾಯತರು ಬಿಜೆಪಿ ಕೈ ಹಿಡಿದಿದ್ದರು. ಶೇ.16ರಷ್ಟು ರಾಜ್ಯದ ಮತದಾರರನ್ನು ಹೊಂದಿರುವ ಲಿಂಗಾಯತರು ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ.
ಕಾಂಗ್ರೆಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪ :ಉತ್ತರ ಕರ್ನಾಟಕ ಭಾಗದಲ್ಲಂತೂ ಪ್ರಾಬಲ್ಯ ಹೊಂದಿರುವ ಲಿಂಗಾಯತ ಸಮುದಾಯವನ್ನು ಶತಾಯಗತಾಯ ಕಾಂಗ್ರೆಸ್ನತ್ತ ಸೆಳೆಯುವ ಪ್ರಯತ್ನ ನಿರಂತರವಾಗಿ ವಿಫಲವಾಗುತ್ತಲೇ ಬಂದಿದೆ. ಇದೀಗ ಹೈಕಮಾಂಡ್ನಿಂದ ಬಿಎಸ್ವೈಗೆ ಅನ್ಯಾಯವಾಗಿದೆ ಎಂಬ ವಿಚಾರ ಮುಂದಿಟ್ಟು ಲಿಂಗಾಯತ ಸಮುದಾಯವನ್ನು ಸೆಳೆಯುವ ಮೂಲಕ ಪ್ರಬಲ ಸಮುದಾಯವನ್ನು ತಮ್ಮದಾಗಿಸಿಕೊಳ್ಳುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿತ್ತು. ಆದರೆ, ಬಿಎಸ್ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಕಟ್ಟಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮತ ಚದುರಿಲ್ಲ :ಒಂದೆಡೆ ಬಿಜೆಪಿ ಜೊತೆಗಿದ್ದ ಸಮುದಾಯದ ಮತ ಚದುರದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ ಸರ್ವಪಕ್ಷಗಳ ಜೊತೆಗೂ ಉತ್ತಮ ಬಾಂಧವ್ಯ ಹೊಂದಿರುವ ವ್ಯಕ್ತಿಯನ್ನು ಸಿಎಂ ಸ್ಥಾನದಲ್ಲಿ ಕೂರಿಸಲಾಗಿದೆ. ಬಿ ಎಸ್ ಯಡಿಯೂರಪ್ಪ ಮಾರ್ಗದರ್ಶನದಲ್ಲೇ ಮುನ್ನಡೆಯುವ ಹೇಳಿಕೆ ನೀಡುವ ಮೂಲಕ ಲಿಂಗಾಯತ ಮತದಾರರ ದೃಷ್ಟಿಯಲ್ಲಿ ಬಸವರಾಜ್ ಬೊಮ್ಮಾಯಿ ದೊಡ್ಡ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.