ಬೆಂಗಳೂರು: ಕಾಂಗ್ರೆಸ್ ತನ್ನ ಹಳೆಯ ಚಾಳಿಗೆ ಅಂಟಿಕೊಂಡಿದೆ, ವೋಟ್ ಬ್ಯಾಂಕ್ ರಾಜಕೀಯ, ಓಲೈಕೆ ರಾಜಕೀಯದಲ್ಲೇ ಮುಳುಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಾಗ್ದಾಳಿ ನಡೆಸಿದ್ದಾರೆ.
ಓಲೈಕೆ, ವೋಟ್ ಬ್ಯಾಂಕ್ ರಾಜಕೀಯಕ್ಕೆ 'ಕೈ' ಅಂಟಿ ಕುಳಿತಿದೆ: ಬಿ.ಎಲ್ ಸಂತೋಷ್ ಟೀಕೆ - ಬೆಂಗಳೂರು ಗಲಭೆ ಪ್ರಕರಣ
ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಾಗ್ದಾಳಿ ನಡೆಸಿದ್ದು, ಗಲಭೆಗಳನ್ನು ಖಂಡಿಸದೇ ಮುಂಬರುವ ಬಿಬಿಎಂಪಿ ಚುನಾವಣೆಯತ್ತ ಮಾತ್ರ ಕಣ್ಣಿಟ್ಟು ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಗಲಭೆಗಳನ್ನು ಖಂಡಿಸುವುದಿಲ್ಲ. ಸ್ವಂತ ತನ್ನದೇ ಪಕ್ಷದ ದಲಿತ ಶಾಸಕರ ಮನೆಯ ಮೇಲೆ ನಡೆದ ದಾಳಿಯನ್ನು ಖಂಡಿಸುವುದಿಲ್ಲ. ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯ ಪ್ರತಿಮೆಯನ್ನು ಅಪವಿತ್ರಗೊಳಿಸುವುದನ್ನು ಪ್ರಶ್ನಿಸುವುದಿಲ್ಲ. ಎಐಸಿಸಿ ಮತ್ತು ಕೆಪಿಸಿಸಿ ಹಳೆಯ ಚಾಳಿಯನ್ನು ಮುಂದುವರೆಸುತ್ತಿದೆ. ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟರ್ ಅವರ ಪತಿ ಕಲೀಮ್ ಪಾಷಾ ಅವರನ್ನು ಬಂಧಿಸಲಾಗಿದೆ. ಎಸ್‌ಡಿಪಿಐನ 4 ಹಿರಿಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಆಪಾದನೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಗಲಭೆಗಳನ್ನು ಖಂಡಿಸುವುದಿಲ್ಲ. ಮುಂಬರುವ ಬಿಬಿಎಂಪಿ ಚುನಾವಣೆಯತ್ತ ಮಾತ್ರ ಕಣ್ಣಿಟ್ಟು ಕಾಂಗ್ರೆಸ್ ಹೀಗೆ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ.