ಬೆಂಗಳೂರು: ಎನ್ಆರ್ಸಿ ಮತ್ತು ಸಿಎಎ ವಿರುದ್ಧ ಸಾರ್ವಜನಿಕರೇ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಗಳಿಗೆ ಕುಮ್ಮಕ್ಕು ಕೊಡ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಗಾಂಧಿನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಮಾಡ್ತಿರೋದು ದೇಶಕ್ಕೆ ಒಳ್ಳೆಯದಲ್ಲ. ಬಿಜೆಪಿ ಅನಾವಶ್ಯಕವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದೆ. ಅವರ ಉದ್ದೇಶವೇ ಹಿಂದು ವರ್ಸಸ್ ಮುಸ್ಲಿಂ ವಾತಾವರಣ ನಿರ್ಮಿಸಬೇಕು ಎಂಬುದು. ಆ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಬಿಜೆಪಿ ವರ್ಸಸ್ ಕಾಂಗ್ರೆಸ್ ರೀತಿ ಬಿಂಬಿಸಲು ಹೊರಟಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಪ್ರಧಾನಿ ಒಂದು ಮಾತು ಹೇಳ್ತಾರೆ. ಗೃಹ ಸಚಿವ ಅಮಿತ್ ಶಾ ಅವರು ಒಂದು ಮಾತು ಹೇಳ್ತಾರೆ. ಹೀಗಿರುವಾಗ ಪ್ರಹ್ಲಾದ್ ಜೋಶಿ ಅವರು ಹೇಳೋದನ್ನ ನಾವು ಹೇಗೆ ನಂಬೋದು. ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆ ಬಿಜೆಪಿಗರು ಚರ್ಚೆ ನಡೆಸಲು ಸಿದ್ಧರಿಲ್ಲ. ಹೀಗಾಗಿಯೇ ಬಿಜೆಪಿ ಮಹಾರಾಷ್ಟ್ರ ಕಳೆದುಕೊಂಡಿದೆ. ಈಗ ಜಾರ್ಖಂಡ್ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಲಕ್ಷಣಗಳಿವೆ ಎಂದರು.
ಪ್ರಧಾನಿ ದಾರಿ ತಪ್ಪಿಸಿದ್ದಾರೆ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಘರ್ಷಣೆ ವಿಚಾರ ಮಾತನಾಡಿದ ಅವರು, ಪ್ರಧಾನಿಯವರ ನಿನ್ನೆಯ ಹೇಳಿಕೆ ಜನರನ್ನ ದಾರಿ ತಪ್ಪಿಸುವಂತಿದೆ. ಹಲವು ಕಡೆ ಡಿಟೆಕ್ಷನ್ ಸೆಂಟರ್ ತೆರೆಯಲಾಗಿದೆ. ಇದರ ಬಗ್ಗೆ ಅವರು ಎಲ್ಲೂ ಬಾಯ್ಬಿಡ್ತಿಲ್ಲ. ಪ್ರತಿಭಟನೆಗೆ ಕಾಂಗ್ರೆಸ್ ಕಾರಣ ಅಂತ ಆರೋಪಿಸ್ತಾರೆ. ನಾವು ಎಲ್ಲೂ ಬಹಿರಂಗವಾಗಿ ಪ್ರತಿಭಟನೆ ಮಾಡಿಲ್ಲ. ದೇಶದಲ್ಲಿ ನೂರೆಂಟು ಸಮಸ್ಯೆಗಳಿವೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಇಂತಹ ಸಂದರ್ಭದಲ್ಲಿ ಇದೆಲ್ಲವೂ ಬೇಕಿತ್ತಾ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.