ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಇಬ್ಬರು ದೇಶದ್ರೋಹಿಗಳು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಿಂದ ರಾಜಭವನದವರೆಗೆ ಮೆರವಣಿಗೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಸಚಿವ ಈಶ್ವರಪ್ಪ ಹೇಳಿಕೆ ಬಾಯ್ ತಪ್ಪಿನಿಂದಾಗಿ ಬಂದಿದ್ದಲ್ಲ ಉದ್ದೇಶಪೂರ್ವಕವಾಗಿ ಹೇಳಿದ್ದಾಗಿದೆ. ಈ ರಾಷ್ಟ್ರವಿರೋಧಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಸಿಎಂ ಸೇರಿದಂತೆ ಸರ್ಕಾರವೇ ಈಶ್ವರಪ್ಪ ಬೆನ್ನಿಗೆ ನಿಂತದ್ದು ಸರಿಯಲ್ಲ.
ರಾಷ್ಟ್ರದ್ರೋಹಿ ಹೇಳಿಕೆಯನ್ನು ನೀಡಿರುವ ಈಶ್ವರಪ್ಪ ಹಾಗೂ ಹಾಗೂ ಅದನ್ನು ಸಮರ್ಥಿಸಿರುವ ಸಿಎಂ ಕೂಡ ದೇಶದ್ರೋಹಿಯಾಗಿದ್ದಾರೆ. ಇದರಿಂದ ಮುಂದಿನ ನಿರ್ಧಾರ ನಿಮಗೆ ಬಿಟ್ಟಿದ್ದು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸಂದರ್ಭ ತಿಳಿಸಿದ್ದೇವೆ. ಅವರಿಂದ ಸೂಕ್ತ ಕ್ರಮ ಜರುಗುವ ನಿರೀಕ್ಷೆ ಇದೆ ಎಂದರು.
ಕೇಸರಿ ಧ್ವಜವನ್ನು ಕೆಂಪು ಕೋಟೆ ಮೇಲೆ ಇವತ್ತಲ್ಲ ನಾಳೆ ಹಾರಿಸ್ತೇವೆ ಎಂದರು. ರಾಷ್ಟ್ರಧ್ವಜ ಹಾರಾಡುವ ಕೆಂಪುಕೋಟೆ ಮೇಲೆ ಕೇಸರಿ ಧ್ಚಜ ಹಾರಿಸ್ತೇವೆ ಅಂದಿದ್ದಾರೆ. ಇದು ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನ. ಅಕ್ಷಮ್ಯ ಅಪರಾಧ. ಇವತ್ತು ನಾವೆಲ್ಲ ರಾಜ್ಯಪಾಲರ ಭೇಟಿ ಮಾಡಿದೆವು.
ಪಾದಯಾತ್ರೆಯಲ್ಲಿ ನಿಯೋಗದ ಜತೆ ಬಂದು ಮನವಿ ಸಲ್ಲಿಸಿದ್ದೇವೆ. ಫ್ಲ್ಯಾಗ್ ಕೋಡ್ನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದು ದೇಶದ್ರೋಹದ ಹೇಳಿಕೆ. ಪ್ರತಿಯೊಬ್ಬ ಪ್ರಜೆಯ ಮೂಲ ಹಕ್ಕು ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಗೌರವಿಸುವುದು. ಗೌರವಿಸದಿದ್ದರೆ ಅಪರಾಧ, ಈ ಅಪರಾಧಕ್ಕೆ ಶಿಕ್ಷೆ ಆಗುತ್ತೆ ಎಂಬ ವಿಚಾರವನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವಂತೆ ಕೋರಿದ್ದೇವೆ ಎಂದು ಹೇಳಿದರು.
ಈಶ್ವರಪ್ಪ ಮಾಡಿದ್ದೂ ದೇಶದ್ರೋಹದ ಕೆಲಸ, ಸಿಎಂ ಮಾಡಿದ್ದೂ ದೇಶದ್ರೋಹದ ಕೆಲಸ. ನಮ್ಮ ನಿಲುವಳಿ ಸೂಚನೆ ತಿರಸ್ಕರಿಸಲಾಯ್ತು. ನಮ್ಮ ಚರ್ಚೆ ಕೇಳಲೇ ಇಲ್ಲ. ಮೇಲ್ಮನೆಯಲ್ಲಿ ಚರ್ಚೆ ಆಯ್ತು. ಐದು ದಿನ ನಾವು ಧರಣಿ ಮಾಡಿದೆವು. ಈಶ್ವರಪ್ಪ 2006 ರಿಂದಲೂ ಸಚಿವರು. ದುರುದ್ದೇಶದಿಂದ ಹೇಳಿಕೆ ಕೊಟ್ಟಿದ್ದಾರೆ.