ಬೆಂಗಳೂರು:ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿತು.
ಗೃಹ ಕಚೇರಿ ಕೃಷ್ಣಾಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಚಿವ ಕೆ.ಜೆ.ಜಾರ್ಜ್, ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ಪಕ್ಷದ ಮುಖಂಡರ ನಿಯೋಗ ಸಿಎಂ ಭೇಟಿ ಮಾಡಿತು. ಈ ವೇಳೆ ಕಾಂಗ್ರೆಸ್ ಶಾಸಕರ ಕ್ಷೇತ್ರದ ಅನುದಾನ ಕಡಿತ ಸಂಬಂಧ ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಅನುದಾನ ಕಡಿತ ನಿರ್ಧಾರ ಕೈಬಿಡುವಂತೆ ಮನವಿ ಮಾಡಿತು.
ಸಿಎಂಗೆ ಕಾಂಗ್ರೆಸ್ ನಿಯೋಗ ಮನವಿ ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿಎಂ ನಗರೋತ್ಥಾನ ಯೋಜನೆಯನ್ನು ಸಿದ್ದರಾಮಯ್ಯನವರು ಇದ್ದ ವೇಳೆ ಮಂಜೂರಾಗಿ ಮೈತ್ರಿ ಸರ್ಕಾರದಲ್ಲಿ ಅನುಮೋದನೆ ನೀಡಲಾಗಿತ್ತು. ಅದರಡಿ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಮೂಲಸೌಕರ್ಯ ಉತ್ತಮಗೊಳಿಸಲು 8 ಸಾವಿರ ಕೋಟಿ ರೂಗೂ ಅಧಿಕ ಹಣದ ವಿಶೇಷ ಪ್ಯಾಕೇಜ್ ಮಂಜೂರಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಕೆಲ ಬದಲಾವಣೆ ಮಾಡಲಾಗಿದೆ ಎಂದರು.
ಅನುದಾನ ಕಡಿತದಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಲಿದೆ. ಹೀಗಾಗಿ ಈ ವಿಚಾರವನ್ನು ಸಿಎಂ ಗಮನಕ್ಕೆ ತಂದಿದ್ದು ಅವರು ಸರಿಮಾಡುವ ಆಶ್ವಾಸನೆ ನೀಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ರಾಜಕೀಯ ಮಾಡಲ್ಲ, ಅಧಿಕಾರಿಗಳ ಜೊತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ ಎಂದು ಗುಂಡೂರಾವ್ ತಿಳಿಸಿದ್ರು.