ಬೆಂಗಳೂರು : ’’ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ರೆ ಏನಾಗಲಿದೆ ಎಂಬುದಕ್ಕೆ ತೇಜಸ್ವಿ ಸೂರ್ಯ ನಿದರ್ಶನ’’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ. ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಪ್ರಯಾಣಿಕರೊಬ್ಬರು ತೆರೆದಿದ್ದರು ಎಂದು ವರದಿಯಾಗಿತ್ತು. ಇದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ತೆಗೆದಿದ್ದಾರೆ ಎಂದು ಹೇಳಲಾಗಿತ್ತು. ಇದನ್ನೇ ಅಸ್ತವನ್ನಾಗಿಸಿ ಕೊಂಡಿರುವ ಕಾಂಗ್ರೆಸ್, ಟ್ವೀಟ್ ಮೂಲಕ ಟೀಕಾ ಪ್ರಹಾರ ನಡೆಸಿದೆ. ‘‘ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದೇಕೆ?. ದೋಸೆ ತಿನ್ನುವ ಚಪಲ ಹೆಚ್ಚಾಗಿ ಎಮರ್ಜೆನ್ಸಿ ಎಕ್ಸಿಟ್ ಆಗಲು ಹೊರಟಿದ್ದಾ?‘‘ ಎಂದು ಕೈ ಪಕ್ಷ ಕುಟುಕಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿ, ಬಿಜೆಪಿಯ ವಿಐಪಿ ಹುಡುಗನನ್ನು ಯಾವ ಧೈರ್ಯದಲ್ಲಿ ವಿಮಾನ ಸಂಸ್ಥೆ ದೂರುತ್ತಿದೆ?. ಬಿಜೆಪಿಯ ಪ್ರಬಲರಿಗೆ ಇದು ಹೊಸ ನಿಯಮವೇ? ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಮಾಡಿದ್ದಾರೆಯಾ? ಬಿಜೆಪಿಯ ಬಲಾಢ್ಯ ವಿಐಪಿಗಳ ಬಗ್ಗೆ ನೀವು ಪ್ರಶ್ನೆ ಮಾಡುವಂತಿಲ್ಲ ಎಂದು ಲೇವಡಿ ಮಾಡಿದೆ.
ಏನಿದು ಘಟನೆ?:ಕಳೆದ ಡಿಸೆಂಬರ್ 10 ರಂದು ಪ್ರಯಾಣಿಕರೊಬ್ಬರು ಚೆನ್ನೈನಿಂದ ತಿರುಚಿರಾಪಳ್ಳಿಗೆ ತೆರಳಲು ಅಣಿಯಾಗಿ ನಿಂತಿದ್ದ ಇಂಡಿಗೋವಿಮಾನದ ತುರ್ತು ನಿರ್ಗಮನ ದ್ವಾರ ಎಳೆದಿದ್ದಾರೆ ಎಂದು ವರದಿಯಾಗಿತ್ತು. ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಸುರಕ್ಷತೆಗೆ ಸಂಬಂಧಿಸಿದ ಶಿಷ್ಟಾಚಾರ ಕುರಿತು ಮಾಹಿತಿ ನೀಡುತ್ತಿರುವಾಗ ಘಟನೆ ನಡೆದಿದೆ. ಪ್ರಯಾಣಿಕರ ತುರ್ತು ನಿರ್ಗಮನದ ಬಳಿ ಕುಳಿತಿದ್ದ ಪ್ರಯಾಣಿಕ , ಇದ್ದಕ್ಕಿದ್ದಂತೆ ಲಿವರ್ ಎಳೆದು ನಿರ್ಗಮನ ದ್ವಾರ ತೆರೆದಿದ್ದರು ಎಂದು ಹೇಳಲಾಗಿದೆ.
ತಕ್ಷಣ ಪ್ರಯಾಣಿಕರನ್ನೆಲ್ಲ ವಿಮಾನದಿಂದ ಕೆಳಗಿಳಿಸಿ ಬಸ್ಸಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು. ಏರ್‌ಲೈನ್ ಅಧಿಕಾರಿಗಳು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸ್ಥಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮತ್ತೆ ವಿಮಾನ ಹಾರಾಟ ಆರಂಭಿಸಲು ಕನಿಷ್ಠ ಎರಡು ಗಂಟೆ ಬೇಕಾಯಿತು. ನಿಯಮ ಉಲ್ಲಂಘನೆಗೆ ಕೂಡಲೇ ಸಂಬಂಧಪಟ್ಟ ಪ್ರಯಾಣಿಕ ಕ್ಷಮೆಯಾಚಿಸಿದ್ದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಇದನ್ನೂ ಓದಿ:ವಿಮಾನದ ತುರ್ತು ಬಾಗಿಲು ತೆರೆದ ಪ್ರಯಾಣಿಕ..ಹೇಳಿಕೆ ನೀಡಿದ ಡಿಜಿಸಿಎ