ಬೆಂಗಳೂರು:ಈವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ಮಾಡಿ ಕಾಂಗ್ರೆಸ್ ಟೀಕೆ ಗುರಿಯಾಗಿದ್ದ ಬಿಜೆಪಿ ಕೊನೆಗೂ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರಿಗೆ ವಿಪಕ್ಷ ನಾಯಕನಾಗಿ ಪ್ರಮುಖ ಜವಾಬ್ದಾರಿ ನೀಡಿದೆ. ಆದ್ರೆ ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ವಿಪಕ್ಷ ನಾಯಕ ಸಂಬಂಧ ಸರಣಿ ಎಕ್ಸ್ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್, ವಿರೋಧ ಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲದ ನಕಲಿ ಸಾಮ್ರಾಟನೇ ಕೊನೆಯದಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಪಕ್ಷವು ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ಇದು ನಿದರ್ಶನ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರಂತಹ ನಾಯಕರೆದುರು ತರಗೆಲೆಯಂತಹ ವ್ಯಕ್ತಿಯನ್ನು ಬಿಜೆಪಿ ತಂದು ಕೂರಿಸಿದೆ ಎಂದು ಲೇವಡಿ ಮಾಡಿದೆ.
ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದೇ ಬಿಜೆಪಿಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅರ್ಹತೆಯೇ?. ಈ ಆಯ್ಕೆ ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಆಗಿದ್ದೋ, ಜೆಡಿಎಸ್ ಶಾಸಕರ ಅಭಿಪ್ರಾಯದ ಆಧಾರದಲ್ಲಿ ಆಗಿದ್ದೋ, ಬಿಜೆಪಿ ಶಾಸಕರ ಅಭಿಪ್ರಾಯದಿಂದ ಆಗಿದ್ದೋ?. ರಾಜ್ಯಕ್ಕೆ ವಿರೋಧ ಪಕ್ಷದ ನಾಯಕನನ್ನು ಕೊಡಿ ಎಂದರೆ ವಿರೋಧ ಪಕ್ಷವನ್ನೇ ವಿರೋಧಿಸುವ ನಾಯಕರನ್ನು ನೀಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.