ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸದ್ದಿಲ್ಲದೆ ವಾರ್ ರೂಂಗಳ ಮೂಲಕ ಚುನಾವಣಾ ತಂತ್ರಗಾರಿಕೆ ಹೆಣೆಯಲು ಶುರುಮಾಡಿವೆ. ತಮ್ಮ ತಮ್ಮದೇ ಆದ ರಾಜಕೀಯ ತಂತ್ರ ರೂಪಿಸುತ್ತಿವೆ. ಅಭ್ಯರ್ಥಿಗಳ ಸಾಮರ್ಥ್ಯದ ಪರಾಮರ್ಶೆ ಜೊತೆಗೆ ಹೊಸಬರಿಗೆ ಮಣೆ ಹಾಕುವ ಕುರಿತ ರಣತಂತ್ರ ಇಲ್ಲಿಯೇ ಸಿದ್ಧವಾಗಲಿದೆ.
ಹೈಕಮಾಂಡ್ ಗಳ ನಿರ್ದೇಶನದಂತೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ವಾರ್ ರೂಂ ತೆರೆದಿದ್ದು, 2023 ರ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿವೆ. ಆಡಳಿತಾರೂಢ ಬಿಜೆಪಿ ಮಲ್ಲೇಶ್ವರದ ಕೆನರಾ ಯೂನಿಯನ್ ಎದುರು 8ನೇ ಮುಖ್ಯ ರಸ್ತೆಯಲ್ಲಿ ಪಕ್ಷದ ರಾಜ್ಯ ಮಟ್ಟದ ವಾರ್ ರೂಂ ತೆರೆದಿದೆ. ಪ್ರತಿಪಕ್ಷ ಕಾಂಗ್ರೆಸ್ ವಾರ್ ರೂಂಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಉದ್ಘಾಟನೆಯನ್ನು ಬಾಕಿ ಉಳಿಸಿಕೊಂಡಿದೆ. ಯಾವ ಜಾಗದಲ್ಲಿ ವಾರ್ ರೂಂ ಸಿದ್ಧವಾಗಿದೆ ಎನ್ನುವ ಮಾಹಿತಿಯನ್ನು ಸ್ಯದ್ಯದಲ್ಲೇ ಪ್ರಕಟಿಸಲಾಗುತ್ತದೆ ಎಂದು ಕೆಪಿಸಿಸಿ ವಕ್ತಾರರು ಮಾಹಿತಿ ನೀಡಿದ್ದಾರೆ.
ವಾರ್ ರೂಂ ಮೂಲಕ ಸಂಘಟನೆ:ಸದ್ಯಕ್ಕೆ ಬಿಜೆಪಿ ಆರಂಭಿಸಿರುವ ರಾಜ್ಯ ಮಟ್ಟದ ವಾರ್ ರೂಂ ಮೂಲಕ ಮೊದಲ ಹಂತವಾಗಿ ಜಿಲ್ಲೆ, ಜಿಲ್ಲೆಯಿಂದ ಮಂಡಲ, ಮಂಡಲದಿಂದ ಮತಗಟ್ಟೆವರೆಗೆ, ಮತಗಟ್ಟೆಯಿಂದ ಕಾರ್ಯಕರ್ತ, ಅಲ್ಲಿಂದ ಮತದಾರರನ್ನು ಸಂಪರ್ಕಿಸುವ ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಸಂಘಟನಾತ್ಮಕವಾಗಿ ಚುನಾವಣೆಯನ್ನು ಎದುರಿಸುವುದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ವಾರ್ ರೂಂ ಮೂಲಕ ಸಂಘಟಿಸಲಾಗುತ್ತಿದೆ. ಪೇಜ್ ಕಮಿಟಿಯಿಂದ ಆರಂಭಿಸಿ ಬೂತ್ ಸಶಕ್ತೀಕರಣ ಕಾರ್ಯವನ್ನು ಪೂರ್ಣಗೊಳಿಸಿರುವ ಬಿಜೆಪಿ ಮತಗಟ್ಟೆಯಲ್ಲೂ ವಾರ್ ರೂಂಗಳನ್ನು ತೆರೆದು ರಣತಂತ್ರ ಆರಂಭಿಸಿದೆ.
ವಾರ್ ರೂಂಗೆ ಎಲ್ಲರ ಮುಕ್ತ ಪ್ರವೇಶಕ್ಕೆ ನಿರ್ಬಂಧ: ಬಿಜೆಪಿ ಆರಂಭಿಸಿರುವ ಈ ವಾರ್ ರೂಂನಲ್ಲಿ ಮೀಡಿಯಾ ಸೆಂಟರ್, ಕಾಲ್ ಸೆಂಟರ್, ಸಾಮಾಜಿಕ ಜಾಲತಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣೆ ವೇಳೆ ಪಕ್ಷದ ಪರವಾದ ಸುದ್ದಿಗೋಷ್ಟಿಗಳನ್ನು ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿಯೇ ಮಾಧ್ಯಮ ಕೇಂದ್ರ ತೆರೆದಿದೆ.
ಈ ವಾರ್ ರೂಂಗೆ ಎಲ್ಲರ ಮುಕ್ತ ಪ್ರವೇಶಕ್ಕೆ ನಿರ್ಬಂಧವಿರಲಿದೆ. ಜವಾಬ್ದಾರಿ ನಿರ್ವಹಣೆ ಮಾಡುವವರಿಗೆ ಮಾತ್ರ ಪ್ರವೇಶವಿರಲಿದೆ.