ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಕಾಂಗ್ರೆಸ್ ನಿಯೋಗ ದೂರು ಸಲ್ಲಿಸಿದೆ. ಕಾಂಗ್ರೆಸ್ ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರ್ ನೇತೃತ್ವದ ನಿಯೋಗದಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ ಬೆಂಬಲ ನೀಡುತ್ತೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೂರನ್ನು ದಾಖಲಿಸಲಾಗಿದೆ. ಇನ್ನೊಂದೆಡೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದವರನ್ನು ಮುಗಿಸುವ ಬಗ್ಗೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಗೆ ಕಾಂಗ್ರೆಸ್ ನಿಯೋಗ ದೂರು ನೀಡಿದೆ. ನಿಯೋಗದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪವನ್ ಖೇರಾ, ರಮೇಶ್ ಬಾಬು, ಗೌರವ್ ವಲ್ಲಭ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಟ್ವೀಟ್ ಆಕ್ರೋಶ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಇದೇ ವಿಚಾರವಾಗಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, "ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬದ ಸದಸ್ಯರನ್ನು ಸಾಫ್ ಮಾಡ್ತೇನೆ" ಎಂದು ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಹತ್ಯೆಯ ಬೆದರಿಕೆ ಒಡ್ಡಿರುವುದು ಅತ್ಯಂತ ಖಂಡನೀಯ. ಪೊಲೀಸರು ತಕ್ಷಣ ಆರೋಪಿ ರಾಠೋಡ್ನನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು ಮತ್ತು ಖರ್ಗೆ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ರೀತಿ ಹಲವು ಕಾಂಗ್ರೆಸ್ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರುವ ಯತ್ನ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸಹ ಆಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಬಾದಾಮಿ, ಹಾವೇರಿಯಲ್ಲಿ ಮೋದಿ ಭರ್ಜರಿ ಪ್ರಚಾರ : ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಸರ್ಕಾರ ತರಬೇಕೆಂದ ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್:ಬೆಂಗಳೂರಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮೀರಾ ಕುಮಾರ್, ನೀವು ರಾಜ್ಯದಲ್ಲಿ ಅಭಿವೃದ್ಧಿ ಆಗಬೇಕಾದರೆ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳುವ ಸರ್ಕಾರ ತರಬೇಕು. ಕರ್ನಾಟಕ ರಾಜ್ಯದ ಪಾಲಿಗೆ ಇದು ಅತ್ಯಂತ ಮಹತ್ವದ ಕಾಲಘಟ್ಟ. ಮುಂದಿನ ಮೂರು ದಿನಗಳಲ್ಲಿ ರಾಜ್ಯದ ಭವಿಷ್ಯದ ದಿಕ್ಕು ತೀರ್ಮಾನವಾಗುತ್ತದೆ. ಹೀಗಾಗಿ ರಾಜ್ಯದ ಮತದಾರರು ಬಹಳ ಆಲೋಚನೆ ಮಾಡಿ, ಜಾಗೃತರಾಗಬೇಕು. 2008ರಿಂದ 2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ರಾಜ್ಯ ಮೂವರು ಮುಖ್ಯಮಂತ್ರಿಗಳನ್ನು ಕಂಡಿತ್ತು. ರಾಜಕೀಯ ಅಸ್ಥಿರತೆ ಇಲ್ಲದೆ ಅಭಿವೃದ್ಧಿ ಕಾಣಲು ಸಾಧ್ಯವಾಗಲಿಲ್ಲ. 2019ರಿಂದ ಇಲ್ಲಿಯವರೆಗೂ ನಾಲ್ಕು ವರ್ಷಗಳ ಕಾಲ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಕಂಡಿದ್ದು, ಯಾವುದೇ ಅಭಿವೃದ್ಧಿ ಆಗಿಲ್ಲ. ಕಾಂಗ್ರೆಸ್ 2013ರಿಂದ 2018ರ ವರೆಗೆ ಕೇವಲ ಓರ್ವ ಮುಖ್ಯಮಂತ್ರಿ ಹೊಂದಿದ್ದು, ರಾಜಕೀಯ ಸ್ಥಿರತೆ ಮೂಲಕ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿತ್ತು. ಹೀಗಾಗಿ ರಾಜ್ಯದ ಜನರು ಈ ಸಂದರ್ಭದಲ್ಲಿ ರಾಜಕೀಯ ಸ್ಥಿರತೆಗೆ ಮತ ಹಾಕುತ್ತಾರೋ ಅಥವಾ ರಾಜಕೀಯ ಅಸ್ಥಿರತೆಗೆ ಮತ ಹಾಕುತ್ತಾರೋ ಅವರೇ ತೀರ್ಮಾನಿಸಬೇಕು ಎಂದಿದ್ದಾರೆ.
ಕರ್ನಾಟಕ ದೇಶದ ಅತ್ಯಂತ ಅಭಿವೃದ್ಧಿ, ಪ್ರಗತಿ ಹೊಂದಿರುವ ರಾಜ್ಯ. ಈ ರಾಜ್ಯ ನಮ್ಮ ಹೆಮ್ಮೆಯಾಗಿದೆ. ಇದು ದೇಶದ ಸಿಲಿಕಾನ್ ವ್ಯಾಲಿ ಆಗಿದೆ. ಬೆಂಗಳೂರು ಅಮೆರಿಕದ ಸಿಲಿಕಾನ್ ವ್ಯಾಲಿ ಆಗಿ ರೂಪಗೊಳ್ಳಬೇಕು. ಇದಕ್ಕೆ ರಾಜಕೀಯ ಸ್ಥಿರತೆ ಬೇಕು. ಆದರೆ ಸದ್ಯ ರಾಜಕೀಯ ಅಸ್ಥಿರತೆಯಿಂದ ರಾಜ್ಯದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ ಹೆಚ್ಚಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇನ್ನು ದೇಶದ ಜನರ ಆಸ್ತಿ ಕೆಲವರ ಪಾಲಾಗುತ್ತಿದೆ. ಈ ಮಧ್ಯೆ ದೇಶದಲ್ಲಿ ಭಾರತೀಯರ ನಡುವೆ ದ್ವೇಷ ಹೆಚ್ಚುತ್ತಿದೆ. ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆಯುತ್ತಿದ್ದು, ಸಮಾಜದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆ ಪುನರ್ ಸ್ಥಾಪಿಸಬೇಕಿದೆ ಎಂದರು.