ಬೆಂಗಳೂರು:ಬಿಜೆಪಿಯವರು ಮಾಡ್ತಿರೋ ಷಡ್ಯಂತ್ರ ಇಡೀ ದೇಶಕ್ಕೆ ಗೊತ್ತಾಗಿದೆ. ಚುನಾವಣೆ ಅಕ್ರಮ ಮಿತಿ ಮೀರಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ದೂರು ಸಲ್ಲಿಸಿ ಬಳಿಕ ಮಾತನಾಡಿದ ಅವರು, ಇಂದು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಕೊಟ್ಟಿದ್ದೇವೆ. ಕೃಷ್ಣಪ್ಪ ರವಿಕುಮಾರ್ ಚಿಲುಮೆ ಸಂಸ್ಥೆಯ ಮಾಲೀಕ. ಇವ್ನು ಪುಣ್ಯಾತ್ಮ ಅಲ್ಲ ದುರಾತ್ಮ. ಇವ್ನೇ ಬಿಎಲ್ ಓಗಳನ್ನು ನೇಮಕ ಮಾಡಿಬಿಟ್ಟಿದ್ದಾನೆ. ಬೇಕಾದವ್ರನ್ನು ಸೇರಿಸಿ, ಬೇಡದವ್ರನ್ನು ತೆಗೆದುಹಾಕಿದ್ದಾರೆ. ಇವೆಲ್ಲವನ್ನೂ ರದ್ದು ಮಾಡಿ. ನಕಲಿ ಬಿಎಲ್ ಓ ಗಳಿಂದಲ್ಲ, ನಿಜವಾದ ಬಿಎಲ್ ಓ ಗಳಿಂದ ಸರ್ವೇ ಮಾಡಿಸಿ ಎಂದರು.
ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ಸಿಎಂ ಹಾಗೂ ಇತರರ ಮೇಲೆ ದೂರು ಕೊಟ್ಟಿದ್ದೇವೆ. ಪರ್ಮಿಶನ್ ಕೊಟ್ಟು ಕ್ಯಾನ್ಸಲ್ ಮಾಡಿದ್ರೆ ಏನರ್ಥ? ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ರೆ ಏನರ್ಥ?. ತಪ್ಪಾಗಿದೆ ಅಂತಾ ಅರ್ಥ ಅಲ್ವಾ? ಪ್ರಭಾವಿಗಳ ಮೇಲೆ ಕ್ರಮ ತೆಗೆದುಕೊಂಡಿಲ್ಲ ಯಾಕೆ..? ಖಾಸಗಿತನವನ್ನು ಕಳ್ಳತನ ಮಾಡಿರೋದು ಇದು ಎಂದು ದೂರಿದರು.
ಸಚಿವ ಅಶ್ವಥ್ ನಾರಾಯಣ್ ಅವರನ್ನು ಬಂಧಿಸಿ: ಸಚಿವ ಅಶ್ವಥ್ ನಾರಾಯಣ್ ಅವರನ್ನು ಕೂಡಲೇ ಬಂಧನ ಮಾಡಬೇಕು. ಅವರ ಲೆಟರ್ ಹೆಡ್, ಪ್ಯಾಡ್, ನೋಟ್ ಮೆಶಿನ್ ಎಲ್ಲಾ ಸಿಕ್ಕಿದೆ. ನಮ್ಮ ಮನವಿ ಕೇಳದೇ ಇದ್ರೆ, ಕೇಂದ್ರ ಚುನಾವಣಾ ಆಯೋಗದ ಮುಂದೆ ಹೋಗ್ತೀವಿ. ಕ್ರಮ ತೆಗೆದುಕೊಳ್ಳದೇ ಇದ್ರೆ ಕೇಂದ್ರ ಚುನಾವಣಾ ಆಯೋಗದ ಮುಂದೆ ಹೋಗ್ತೀವಿ. ಇದು ದೊಡ್ಡ ಫ್ರಾಡ್ ಕೆಲಸ. ಇಡೀ ರಾಜ್ಯಕ್ಕೆ ಮಾಡಿರೋ ಅನ್ಯಾಯ. ಇದು ಪ್ರಜಾಪ್ರಭುತ್ವದ ಕೊಲೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಬಿಜೆಪಿ ಪಕ್ಷ ಚುನಾವಣೆಯಲ್ಲಿ ಸೋಲುತ್ತೆ ಅಂತಾ ಗೊತ್ತಾಗಿದೆ. ದೊಡ್ಡ ಷಡ್ಯಂತ್ರ ಮಾಡ್ತಿದೆ. ಒಂದು ಸಂಸ್ಥೆಯನ್ನು ಮಾಡಿಕೊಂಡು ಎಲೆಕ್ಷನ್ ಕಮಿಶನ್ ಕೋಡ್, ಡಾಟಾ ತೆಗೆದುಕೊಂಡಿದ್ದಾರೆ. ಯಾರ ಹೆಸರು ತೆಗೆಯಬೇಕು, ಯಾರ ಹೆಸರು ಹಾಕಬೇಕು ಎಂದು ನಿರ್ಧಾರ ಮಾಡ್ತಿದ್ರು. ಇದುವರೆಗೆ 27 ಲಕ್ಷ ವೋಟರ್ ಐಡಿ ತೆಗೆದು ಹಾಕಿದ್ದಾರೆ. ಯಾವುದೇ ಪರ್ಮಿಶನ್ ತೆಗೆದುಕೊಂಡಿಲ್ಲ. ಬಿಎಲ್ ಓ ಐಡಿ ಕಾರ್ಡ್ ಕೊಡೋ ಅಥಾರಿಟಿನೇ ಇಲ್ಲ. ಮೂರು ಜನ ಮಂತ್ರಿಗಳು, ಇಬ್ಬರು ಶಾಸಕರು ಚಿಲುಮೆ ಸಂಸ್ಥೆ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ದೂರಿದರು.