ಬೆಂಗಳೂರು: ವಿಧಾನಮಂಡಲ ಉಭಯ ಸದನಗಳ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕೈಗೊಳ್ಳಬೇಕಾದ ಹೋರಾಟಗಳು ಹಾಗೂ ಮಹತ್ವದ ವಿಚಾರಗಳ ಮೇಲಿನ ಚರ್ಚೆಯ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಸಮಾಲೋಚನೆ ನಡೆಯಿತು. ಸದನದಲ್ಲಿ ಯಾವ ವಿಚಾರವನ್ನು ಯಾವ ಸಂದರ್ಭದಲ್ಲಿ ಪ್ರಸ್ತಾಪಿಸಬೇಕು ಹಾಗೂ ಯಾರು ಯಾವ ವಿಚಾರದ ಮೇಲೆ ಮಾತನಾಡಬೇಕು ಎಂಬ ಕುರಿತು ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ನಿರ್ಧರಿಸಿತು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಎರಡು ವಾರಗಳ ವಿಧಾನ ಮಂಡಲ ಅಧಿವೇಶನ ಹಿನ್ನೆಲೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ಕಾಂಗ್ರೆಸ್ ರಾಜ್ಯ ನಾಯಕರು ಸಭೆ ನಡೆಸಿದರು. ಇದೇ ವೇಳೆ, ಮಾಜಿ ಶಾಸಕರು, ಮಾಜಿ ಸಚಿವರು, ಪರಾಜಿತ ಅಭ್ಯರ್ಥಿಗಳ ಸಭೆಯನ್ನೂ ಕಾಂಗ್ರೆಸ್ ನಾಯಕರು ನಡೆಸಿದರು. ಸದನದ ಒಳಗೂ ಸದನದ ಹೊರಗೂ ಹೋರಾಟ ನಡೆಸುವ ಕುರಿತು ಗಂಭೀರ ಚರ್ಚೆ ನಡೆದಿದೆ. ಬಿಜೆಪಿಯ ಭ್ರಷ್ಟಾಚಾರ ವಿಚಾರ, ಕಮಿಷನ್ ಆರೋಪ, ನೇಮಕಾತಿ ಅಕ್ರಮ, ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ಲೋಪ ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಯಿತು.
ಭಾರತ್ ಜೋಡೋ ಚರ್ಚೆ:ಭಾರತ್ ಜೋಡೋ ರೂಟ್ ಮ್ಯಾಪ್ ಬಗ್ಗೆ ಚರ್ಚೆ ನಡೆದಿದೆ. ಭಾರತ್ ಜೋಡೋ ವಿಚಾರವಾಗಿ ಮಾಜಿ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. 23 ಜನ ಮಾಜಿ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಭಾರತ್ ಜೋಡೋ ಜವಾಬ್ದಾರಿ ಹಂಚಿಕೆ ಸಭೆ ಬಳಿಕ ಸಿಎಲ್ಪಿ ಸಭೆ ಪ್ರಾರಂಭವಾಯಿತು.
(ಇದನ್ನೂ ಓದಿ: ಶಾಸಕ ಬಸವರಾಜ ದಡೇಸುಗೂರು ವಿರುದ್ಧ ಮತ್ತೊಂದು ದಾಖಲೆ ಬಿಡುಗಡೆ.. ಮಾಜಿ ಶಾಸಕ ಶಿವರಾಜ್ ತಂಗಡಗಿ)