ಬೆಂಗಳೂರು:ಹತ್ತು ಹಲವು ಕಾರಣಗಳಿಂದ ಸುದ್ದಿಯಾಗುತ್ತಿರುವ ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಇದೀಗ ಅತ್ತೆ-ಸೊಸೆ ನಡುವೆ ಬಾಂಧವ್ಯ ಬೆಸೆಯುವ ಸೇತುವೆಯಾಗಿ ಕಾರ್ಯ ನಿರ್ವಹಿಸಿದೆ.
ರಾಜರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಹನುಮಂತರಾಯಪ್ಪ ಆಯ್ಕೆಗೆ ಆರಂಭದಲ್ಲಿ ಸಾಕಷ್ಟು ಅಪಸ್ವರ ಕೇಳಿ ಬಂದಿದ್ದವು. ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಅವರ ಅತ್ತೆ ಗೌರಮ್ಮ (ಡಿಕೆ ರವಿ ತಾಯಿ) ಕೂಡ ಕುಸುಮಾ ಸ್ಪರ್ಧೆಯನ್ನ ಖಂಡಿಸಿದ್ದರು. ಚುನಾವಣೆ ಪ್ರಚಾರದ ವೇಳೆ ಪುತ್ರನ ಹೆಸರು ಬಳಸಿ ಎಲ್ಲಿಯೂ ಮತ ಕೇಳದಂತೆ ತಾಕೀತು ಮಾಡಿದ್ದರು. ಇದಕ್ಕೆ ಕುಸುಮಾ ಕೂಡ ತಾವು ಎಲ್ಲಿಯೂ ಮೃತ ಪತಿಯ ಹೆಸರನ್ನು ಬಳಸುವುದಿಲ್ಲ ಎಂದು ತಿಳಿಸಿದ್ದರು. ಕೊಟ್ಟ ಮಾತಿನಂತೆ ಎಲ್ಲಿಯೂ ಡಿಕೆ ರವಿ ಹೆಸರು ಬಳಸಿ ಮತ ಯಾಚನೆ ಮಾಡಿರಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಅತ್ತೆ-ಮಾವ ಮತದಾನಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗಲೇ ಕುಣಿಗಲ್ನ ತಮ್ಮ ನಿವಾಸದಲ್ಲಿ ಗೌರಮ್ಮ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೊಸೆಯ ಪರವಾಗಿ ಬ್ಯಾಟಿಂಗ್ ಮಾಡಿರುವ ಗೌರಮ್ಮ, ಚುನಾವಣೆಯಲ್ಲಿ ಕುಸುಮಾಗೆ ಅನುಕೂಲವಾಗುವ ರೀತಿಯಲ್ಲಿ ಮಾತನಾಡಿದ್ದಾರೆ.
ಮತದಾರರ ಮೇಲೆ ಇದು ಎಷ್ಟರಮಟ್ಟಿನ ಪ್ರಭಾವ ಬೀರುತ್ತದೆಯೋ ಗೊತ್ತಿಲ್ಲ. ಆದರೆ, ಈ ಒಂದು ಉಪಚುನಾವಣೆ ಕಣ ಕೆಲವು ವರ್ಷಗಳಿಂದ ಮಾನಸಿಕವಾಗಿ ಹಾಗೂ ಭೌತಿಕವಾಗಿ ದೂರವಾಗಿದ್ದ ಅತ್ತೆ-ಸೊಸೆಯನ್ನು ಒಂದು ಹಂತಕ್ಕೆ ಒಗ್ಗೂಡಿಸಿದೆ. ಕುಸುಮಾ ಸ್ಪರ್ಧೆಯನ್ನೇ ಖಂಡಿಸಿದ್ದ ಗೌರಮ್ಮ ಇದೀಗ ಸೊಸೆಯ ಪರವಾಗಿ ಮಾತನಾಡುವುದು ತೀವ್ರ ಕುತೂಹಲ ಕೂಡ ಮೂಡಿಸಿದೆ. ರಾಜ್ಯ ಕಾಂಗ್ರೆಸ್ನ ಕೆಲ ಪ್ರಮುಖ ನಾಯಕರು ಗೌರಮ್ಮ ಮನವೊಲಿಸಿ ಕಡೆಯ ಕ್ಷಣದಲ್ಲಿ ಸೊಸೆಯ ಪರವಾಗಿ ಮಾತನಾಡುವಂತೆ ಮಾಡಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.
ಒಟ್ಟಾರೆ ಹತ್ತು ಹಲವು ಆರೋಪ-ಪ್ರತ್ಯಾರೋಪಗಳು ನಿಂದನೆ, ಗದ್ದಲ, ಗೊಂದಲ ಹಾಗೂ ಕೋಲಾಹಲಗಳಿಗೆ ಕಾರಣವಾಗಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಇದೀಗ ಸಮಾಧಾನಕರ ಸುದ್ದಿಯನ್ನು ನೀಡಿರುವುದು ವಿಶೇಷ.