ಬೆಂಗಳೂರು :ಮಹದೇವಪುರ ವಿಧಾನಸಭಾ ಕ್ಷೇತ್ರದ ಎಂಎಲ್ಎ ಅಭ್ಯರ್ಥಿಯನ್ನು ಚುನಾವಣೆಗೂ ಮುಂಚಿತವಾಗಿಯೇ ಘೋಷಣೆ ಮಾಡಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಮಹದೇವಪುರ ಕ್ಷೇತ್ರದ ಕಣ್ಣೂರು ಪಂಚಾಯತ್ ವ್ಯಾಪ್ತಿಯಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಮಹದೇವಪುರ ಕ್ಷೇತ್ರ ಕಾಂಗ್ರೆಸ್ನ ಭದ್ರ ಕೋಟೆಯಾಗಿತ್ತು. ಕ್ರಮೇಣ ನಾಯಕತ್ವದ ಕೊರತೆಯಿಂದ ಕಳೆದ ಮೂರು ಬಾರಿ ಸೋತಿದ್ದೇವೆ. ನಾನು ಹಾಗೂ ಡಿ ಕೆ ಶಿವಕುಮಾರ್ ಅವರು, ಸೋತಿರುವ ಎಲ್ಲಾ ಕ್ಷೇತ್ರಗಳಲ್ಲಿ ಮುಂಚಿತವಾಗಿಯೇ ಅಭ್ಯರ್ಥಿ ಘೋಷಣೆ ಮಾಡುತ್ತೇವೆ.
ಬಡವರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿದರು ಸ್ಥಳೀಯ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಮುಂದಿನ ಅಭ್ಯರ್ಥಿ ಹಾಗೂ ನಾಯಕ ಯಾರು ಎಂಬುದರ ಗೊಂದಲದಲ್ಲಿದ್ದಾರೆ. ಮುಖಂಡರ ಗಮನದಲ್ಲಿರುವ ಅಭ್ಯರ್ಥಿಗಳ ಪಟ್ಟಿ ನೀಡಿ ಒಬ್ಬರನ್ನು ಆಯ್ಕೆ ಮಾಡಿ ಮುಂಚಿತವಾಗಿಯೇ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.
ಅಭ್ಯರ್ಥಿ ಆಯ್ಕೆಯಾದ ಮೇಲೆ ಇತರ ಆಕಾಂಕ್ಷಿಗಳಿಗೆ ಬೇಸರ ಆಗಿ ಪಕ್ಷ ತೊರೆಯಬಹುದು. ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಮ್ಮ ಕಾರ್ಯಕರ್ತರು ಎಲ್ಲೂ ಹೋಗುವುದಿಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಇದಕ್ಕೂ ಮೊದಲು ರಾಮಲಿಂಗಾ ರೆಡ್ಡಿ ಮತ್ತು ಎಂಎಲ್ಸಿ ನಾರಾಯಣ ಸ್ವಾಮಿ ಅವರು ಮಹದೇವಪುರದಲ್ಲಿ ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಅಂತ ಗೊತ್ತಾಗದೆ, ಕಾರ್ಯಕರ್ತರಲ್ಲಿ ಗೊಂದಲ ಮತ್ತು ಪಕ್ಷ ಸಂಘಟನೆಗೆ ಸಮಸ್ಯೆ ಎದುರಾಗಿದೆ ಎಂದು ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದರು.