ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ವಯೋಮಾನದವರ ಸುಗಮ ಜೀವನ ಮತ್ತು ಸುಲಲಿತ ಬದುಕಿಗೆ ಪೂರಕವಾಗಿರುವ 'ಮಾರ್ವೆಲಸ್ ಮಲ್ಲೇಶ್ವರಂ' (ಅದ್ಭುತ ಮಲ್ಲೇಶ್ವರಂ) ಹೆಸರಿನ ಸ್ಮಾರ್ಟ್ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್ ಇಂದು ಬಿಡುಗಡೆ ಮಾಡಿದರು.
ಪ್ರೆಸ್ಕ್ಲಬ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಜನರ ಅಭಿಪ್ರಾಯಗಳ ಆಧಾರದ ಮೇಲೆ ಈ ಚುನಾವಣಾ ಭರವಸೆಗಳ ಪತ್ರ ಸಿದ್ಧಪಡಿಸಿದ್ದು, ತಾವು ಚುನಾಯಿತರಾದರೆ ಮಲ್ಲೇಶ್ವರಂ ಭಾಗದ ಗತವೈಭವವನ್ನು ಮರಳಿ ತರುವ ಜೊತೆಗೆ ಎಲ್ಲಾ ವಯೋಮಾನದವರ ಬದುಕನ್ನು ಸಹನೀಯವಾಗಿಸಲು ಶ್ರಮಿಸುತ್ತೇನೆ. ಮಲ್ಲೇಶ್ವರಂ ಬ್ರ್ಯಾಂಡ್ ಉಳಿಸಲು ಸೇವಾ ಮನೋಭಾವನೆಯಿಂದ ಶ್ರಮಿಸುತ್ತೇನೆ ಎಂದರು.
ಮಲ್ಲೇಶ್ವರಂನಲ್ಲಿ ಚತುರ ಸಾರಿಗೆ ವ್ಯವಸ್ಥೆ, ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸಹಾಯವಾಣಿ, ದೇವಸ್ಥಾನಗಳು, ಪಾರಂಪರಿಕ ತಾಣಗಳನ್ನು ಪುನರುಜ್ಜೀವನಗೊಳಿಸಲು ಒತ್ತು ನೀಡುತ್ತೇನೆ. ಕ್ಷೇತ್ರದಲ್ಲಿ ಬೆಂಗಳೂರಿನ ಶೇ 50ಕ್ಕೂ ಹೆಚ್ಚು ನವೋದ್ಯಮಗಳಿದ್ದು, ಇವುಗಳಿಗೆ ಸೂಕ್ತ ಹಣಕಾಸು ನೆರವು ಒದಗಿಸಿ, ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುತ್ತೇನೆ. ಬೀಗ ಹಾಕಿರುವ ಕ್ರೀಡಾಂಗಣಗಳನ್ನು ಕ್ಷೇತ್ರದ ಜನರ ಉಪಯೋಗಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.