ಬೆಂಗಳೂರು: ಅಧಿಕಾರದಲ್ಲಿದ್ದಾಗ ವೀರಶೈವ ಲಿಂಗಾಯತರ ನಡುವೆ ಕಂದಕ ಸೃಷ್ಟಿಸಿದ್ದಾರೆಂಬ ಬಿಜೆಪಿ ಟ್ವೀಟ್ಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಬೇಸರ ಹೊರಹಾಕಿರುವ ಅವರು, ಬಳಸಿ ಬಿಸಾಡುವ ನಿಮ್ಮ ತಂತ್ರಕ್ಕೆ ಬಲಿಯಾಗದೇ ಉಳಿದವರುಂಟೇ ಸರ್ವಜ್ಞ? ನಿಮ್ಮದು ಬಳಸಿಕೊಂಡು ಬಿಸಾಡುವ ನೀತಿ. ಪಕ್ಷವನ್ನು ಕಟ್ಟಿ, ಅಧಿಕಾರಕ್ಕೆ ತಂದವರನ್ನು ಅವಮಾನಿಸಿ, ಜೈಲಿಗಟ್ಟಿ, ಅಧಿಕಾರ ಕಸಿದು ಅವರ ಮೇಲೆಲ್ಲ ರೇಡ್ ಭಾಗ್ಯ ಮಾಡಿಸಿದ ನಿಮ್ಮ ಲಿಂಗಾಯತ ಪ್ರೇಮ ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ.
ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್, ಯತ್ನಾಳ್ ವಿರುದ್ಧ ಮುರುಗೇಶ್ ನಿರಾಣಿ, ನಿರಾಣಿ ವಿರುದ್ಧ ಬಸವರಾಜ ಬೊಮ್ಮಾಯಿ, ಬೊಮ್ಮಾಯಿ ವಿರುದ್ಧ ಶೆಟ್ಟರ್ ಹೀಗೆ ಲಿಂಗಾಯತ ನಾಯಕರು ಕಚ್ಚಾಡುವಂತೆ ಮಾಡಿರುವ ನಿಮ್ಮ ಹಿಡನ್ ಅಜೆಂಡಾ ಏನು ಮನುವಾದಿಗಳೇ? ಎಂದು ಪ್ರಶ್ನಿಸಿದ್ದಾರೆ. ಲಿಂಗಾಯತ ನಾಯಕರನ್ನು ಮುಗಿಸುವುದೇ? ಇವರ ಉದ್ದೇಶ. ನಾಯಕರ ನಡುವೆ ಜಗಳ ಹಚ್ಚಿ, ಅದನ್ನು ನೋಡಿಕೊಂಡು ಕಡ್ಲೆ ಬೀಜ ತಿನ್ನುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಬಿ.ಎಲ್.ಸಂತೋಷ್ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಬಿಎಸ್ವೈಗೆ 2 ಬಾರಿಯೂ ಪೂರ್ಣ ಅಧಿಕಾರ ಕೊಟ್ಟಿಲ್ಲ, ಲಿಂಗಾಯತರ ಮತಗಳು ಈ ಬಾರಿ ಕಾಂಗ್ರೆಸ್ಗೆ ಬರಲಿವೆ: ಎಂ ಬಿ ಪಾಟೀಲ್
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ, ಪಿಎಸ್ಐ ಹಗರಣವನ್ನು ಮುಚ್ಚಿಹಾಕಲು ಸಿಐಡಿ ಪೊಲೀಸ್ ಅಧಿಕಾರಿಗಳು 3 ಕೋಟಿ ಕೇಳಿದ್ದರು. ನಾನು 76 ಲಕ್ಷ ರೂ ಕೊಟ್ಟಿದ್ದೇನೆ ಎಂದು ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಗಂಭೀರ ಆರೋಪ ಮಾಡಿದ್ದಾನೆ. ಪ್ರಾಮಾಣಿಕ, ಪಾರದರ್ಶಕ ತನಿಖೆ ಎಂದು ಡೈಲಾಗ್ ಹೊಡೆದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಪಾರದರ್ಶಕತೆ ಇದೇನಾ?. ಸರ್ಕಾರದ ತನಿಖೆಯಲ್ಲಿ ಸತ್ಯ ಸಮಾಧಿಯಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ:ಎಂ ಬಿ ಪಾಟೀಲ್ ಕೈ ಇನ್ನಷ್ಟು ಬಲಪಡಿಸಿದ ಹೈಕಮಾಂಡ್: ಪ್ರಚಾರ ಸಮಿತಿಗೆ ಇನ್ನಷ್ಟು ನಾಯಕರ ನೇಮಕ
ಪಿಎಸ್ಐ ಹಗರಣದ ಪಾರದರ್ಶಕತೆ ಹೇಗಿದೆ? ಎಂದು ಹಗರಣದ ಆರೋಪಿಯಿಂದಲೇ ಬಯಲಾಗಿದೆ. ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದಾಗ ಪ್ರಾಮಾಣಿಕ ತನಿಖೆ ನಡೆಯುತ್ತಿದೆ ಎಂಬ ಸೋಗಲಾಡಿ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಗೃಹಸಚಿವ ಆರಗ ಜ್ಞಾನೇಂದ್ರ, ಸಿಐಡಿ ಅಧಿಕಾರಿಗಳ 3 ಕೋಟಿ ಡೀಲಿಂಗ್ ಬಗ್ಗೆ ಈಗ ಮಾತಾಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ, ಹಾಗಾಗಿ ಪ್ರಧಾನಿ ಮೋದಿ ಪದೇ ಪದೆ ಬರುತ್ತಾರೆ: ಎಂ ಬಿ ಪಾಟೀಲ್