ಬೆಂಗಳೂರು: ರಾಜ್ಯದಲ್ಲಿ 'ವಿವೇಕ ಯೋಜನೆ' ಅಡಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿರುವ ರಾಜ್ಯ ಸರ್ಕಾರದ ಯೋಜನೆ ವಿರುದ್ಧ ಈಗಾಗಲೇ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ಬೆನ್ನಲ್ಲೇ ಇದೀಗ ಈ ಯೋಜನೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೋರಾಟಕ್ಕೆ ಮುಂದಾಗಿದೆ.
'ಸಿಎಂ ಅಂಕಲ್' ಹ್ಯಾಷ್ ಟ್ಯಾಗ್ ಅಡಿ ಕಾಂಗ್ರೆಸ್ ಕ್ಯಾಂಪೇನ್ ಮುಂದಾಗಿದ್ದು, ಶಾಲಾ ಕೊಠಡಿಗೆ ಬಣ್ಣ ಬಳಿಯುವ ಬದಲು ಮೊದಲು ಶೌಚಾಲಯ ನಿರ್ಮಿಸಿ ಎಂದು ಸಿಎಂ ಬಸವರಾಜ ಬೊಮ್ಮಯಿ ಅವರಿಗೆ ಮನವಿ ಮಾಡಿದೆ. ಈ ಹೋರಾಟದುದ್ದಕ್ಕೂ ಕಾಂಗ್ರೆಸ್, ಶಾಲಾ ಮಕ್ಕಳ ಪರವಾಗಿ ಮುಖ್ಯಮಂತ್ರಿಗಳಿಗೆ ಪ್ರಶ್ನೆಗಳನ್ನು ಮಾಡಲಿದೆ.
ರಾಜ್ಯದೆಲ್ಲೆಡೆ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಶೌಚಾಲಯವಿಲ್ಲದೇ ಮಕ್ಕಳು ತೊಂದರೆ ಅನುಭಿಸುತ್ತಿದ್ದಾರೆ. ಸಿಎಂ ಅಂಕಲ್, ಶಾಲೆಗೆ ಕೇಸರಿ ಬಣ್ಣ ಬಳಿಯುವ ಮೊದಲು ಶೌಚಾಲಯ ನಿರ್ಮಿಸಿ, ಶುದ್ಧ ಕುಡಿಯುವ ನೀರು ಮತ್ತು ಸೌಲಭ್ಯಗಳ ವ್ಯವಸ್ಥೆ ಮಾಡಿ. ಈ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯಿರಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.