ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳು ಮುಗಿದಿಲ್ಲ. ಅಷ್ಟರಲ್ಲಿ ಸ್ವಪಕ್ಷದವರು ಒಳಗೊಳಗೆ ಅಪಸ್ವರ ಎತ್ತಿದ್ದಾರೆ. ಸರ್ಕಾರಕ್ಕೆ ಸ್ವಪಕ್ಷದವರೇ ಸಂಚು ಹೂಡಿ ಒಂದಾಗಿ ಪತನಗೊಂಡರೆ ನಾವೇನು ಮಾಡಲು ಸಾಧ್ಯ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಪ್ರಶ್ನಿಸಿದ್ದಾರೆ.
ಇಲ್ಲಿನ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಮುಖ್ಯಮಂತ್ರಿ ಮಾಡುವುದು ಗೊತ್ತು, ಉರುಳಿಸುವುದು ಗೊತ್ತು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸದೇ ಅವರು ಈ ಮಾತು ಹೇಳಿದರು.
ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ನಮಗಿಲ್ಲ:ಕೇವಲ 19 ಶಾಸಕರನ್ನು ಹೊಂದಿರುವ ನಾವು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಯಾವುದೇ ಉದ್ದೇಶ ನಮಗಿಲ್ಲ. ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಉದ್ದೇಶ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ 4 ರಷ್ಟು ಮೀಸಲಾತಿಯನ್ನು ಹಿಂದಿನ ಸರ್ಕಾರ ರದ್ದುಪಡಿಸಿತ್ತು. ಈ ಮೀಸಲಾತಿಯನ್ನು ಮೊದಲು ಜಾರಿ ಮಾಡುವುದಾಗಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮರುಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಹುತ್ತವನ್ನು ಗೆದ್ದಲು ಹುಳು ಕಟ್ಟುತ್ತದೆ. ಅದರಲ್ಲಿ ಹಾವು ಬಂದು ಸೇರಿಕೊಳ್ಳುತ್ತದೆ ಎಂದು ಆಡಳಿತ ಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಸುಮ್ಮನೆ ಕೂರುವುದಿಲ್ಲ ಎಂದ ಅವರು, ಕಾಂಗ್ರೆಸ್ ಸರ್ಕಾರ ರೈತರಿಗೆ ಯಾವ ಗ್ಯಾರಂಟಿಯನ್ನು ಕೊಟ್ಟಿಲ್ಲ. ಕೃಷಿ, ನೀರಾವರಿ, ಸಹಕಾರ ಇಲಾಖೆಗಳ ಅನುದಾನ ಕಡಿಮೆ ಮಾಡಿದ್ದಾರೆ. ಆದರೆ ಬಜೆಟ್ ಗಾತ್ರದ ಸಾಲದ ಪ್ರಮಾಣ ಮಾತ್ರ ಹೆಚ್ಚಾಗುತ್ತಿದೆ ಎಂದು ಹೇಳಿದರು.