ಬೆಂಗಳೂರು: ಸಾವಿರಾರು ಸುಳ್ಳು ಹೇಳಿ ಮದುವೆ ಮಾಡಿ ಎಂಬ ಮಾತಿದೆ. ಅದೇ ರೀತಿ ಇಂದು ಐದು ಸುಳ್ಳು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೊಟ್ಟ ಭರವಸೆಯನ್ನು ಈಡೇರಿಸುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿಯನ್ನು ಟೀಕೆ ಮಾಡಿತ್ತು. ಚುನಾವಣೆಯಲ್ಲಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿತ್ತು. ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ರಾಜ್ಯದ ಜನರ ವಿಶ್ವಾಸ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿತ್ತು. ಕೋವಿಡ್ ವೇಳೆ ದೇಶದ ಪ್ರಧಾನಿ ಮೋದಿ ಕಠಿಣ ಕ್ರಮಗಳಿಂದ ದೇಶವನ್ನು ರಕ್ಷಿಸುವ ಕೆಲಸ ಮಾಡಿದರು. ಉಚಿತ ಲಸಿಕೆ ಕೊಡುವ ಮೂಲಕ ಸಮಸ್ಯೆಯಿಂದ ಹೊರ ಬರುವ ತರ ಮಾಡಿದ್ದನ್ನು ಜಗತ್ತೇ ಮೆಚ್ಚಿದೆ ಎಂದರು.
ಅಂದಿನ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭ ಮೊದಲ ಲಸಿಕೆಯನ್ನು ದೇಶದಲ್ಲೇ ಮೊದಲಿಗೆ ಶೇ 100ರಷ್ಟು ಕೊಡುವ ಕೆಲಸ ಮಾಡಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದರು. ಈ ವೇಳೆ, ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ನರೇಂದ್ರ ಸ್ವಾಮಿ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಮಾತನಾಡುತ್ತಾರಾ?. ಅಥವಾ ಬಜೆಟ್ ಬಗ್ಗೆ ಮಾತನಾಡುತ್ತಾರಾ ಎಂದು ಪ್ರಶ್ನಿಸಿದರು. ಆಗ ಬಿಜೆಪಿ ಸದಸ್ಯರು ಬಿ.ವೈ. ವಿಜಯೇಂದ್ರ ಬೆಂಬಲಕ್ಕೆ ನಿಂತರು. ನಿಮ್ಮವರು ಹರಿಕತೆ ಮಾತನಾಡಿದ್ದಾರೆ. ಅವರಿಗೆ ಮಾತನಾಡಲು ಅಡ್ಡಿ ಪಡಿಸಬೇಡಿ ಎಂದು ಎದ್ದು ನಿಂತು ಬೆಂಬಲಕ್ಕೆ ನಿಂತರು.