ಬೆಂಗಳೂರು: ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮಾವೇಶವಲ್ಲ, ಕಮಿಷನ್ ಸಮಾವೇಶ. ಶೇ.40ರಷ್ಟು ಕಮಿಷನ್ ಲೂಟಿಯ ಪಾಪದ ಹಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುವಿರಿ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಗುತ್ತಿಗೆದಾರರು ಸರ್ಕಾರದ ಕಮಿಷನ್ ಕಿರುಕುಳದ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಿಲ್ಲ, ಪತ್ರಿಕಾಗೋಷ್ಠಿ ನಡೆಸಿದರೂ ಉಪಯೋಗವಿಲ್ಲ. ಶೇ.40ರಷ್ಟು ಕಮಿಷನ್ ಲೂಟಿ ನಿಂತೇ ಇಲ್ಲ. ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ನಿಮ್ಮ ಸರ್ಕಾರದ ಸಾಧನೆ ಏನು ಬೊಮ್ಮಾಯಿ ಅವರೇ?. ಅಕ್ರಮಗಳನ್ನು ಮುಚ್ಚಿಕೊಳ್ಳುವುದೇ ಸಾಧನೆಯೇ ಎಂದೂ ಪ್ರಶ್ನಿಸಿದೆ.
ಇದನ್ನೂ ಓದಿ:ಜನಸ್ಪಂದನ ಕಾರ್ಯಕ್ರಮ.. ಪ್ರವೀಣ್ ನೆಟ್ಟಾರು ಮನೆಯವರಿಗೆ ಉದ್ಯೋಗ: ಬೊಮ್ಮಾಯಿ ಘೋಷಣೆ
ನಿಮ್ಮದೇ ಪಕ್ಷದ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್‌ರನ್ನು ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಹೇಳಿಕೊಳ್ಳುವಿರಾ?. ಸರ್ಕಾರ ಪರ್ಸೆಂಟೇಜ್ ಮೇಲೆ ನಡೆಯುತ್ತಿದೆಯೇ?. ಗುತ್ತಿಗೆದಾರರು, ಜನಸಾಮಾನ್ಯರ ನಂತರ ಹೈಕೋರ್ಟ್ ಕೂಡ ಶೇ.40 ಸರ್ಕಾರದ ಪರ್ಸೆಂಟೇಜ್ ಬಗ್ಗೆ ಮಾತಾಡುತ್ತಿದೆ. ಬೊಮ್ಮಾಯಿ ಅವರೇ, ಬಿಜೆಪಿ ಭ್ರಷ್ಟೋತ್ಸವದ ಇಂತಹ ನಾಚಿಕೆಗೇಡಿನ ಸಂಗತಿ ಎದುರಿಟ್ಟುಕೊಂಡು ಯಾವ ಪುರುಷಾರ್ಥಕ್ಕೆ ಸಮಾವೇಶ ನಡೆಸುತ್ತಿದ್ದೀರಿ?. ನಾಡಿನ ಎದುರು ತಲೆ ತಗ್ಗಿಸಬೇಕಾದ ಸಮಯವಿದು ಎಂದು ಕಿಡಿಕಾರಿದೆ.
ಯಾವ ಕಾರಣಕ್ಕಾಗಿ ಸಂಭ್ರಮ ಬಿಜೆಪಿ?:ಇತರೆಡೆಯ ಕಮಿಷನ್ ಶೇ.40 ಕಮಿಷನ್ ಆದರೆ, ಬಿಬಿಎಂಪಿಯಲ್ಲಿ ಒಂದು ಹೆಜ್ಜೆ ಮುಂದೆ. ಇಲ್ಲಿ ಶೇ.50ರಷ್ಟು ಕಮಿಷನ್. ಬಿಬಿಎಂಪಿಯ ಭ್ರಷ್ಟಾಚಾರದಲ್ಲಿ ಸಮಪಾಲು ಸಮಬಾಳು ಇರುವುದರಿಂದಲೇ ಇಂದು ಬೆಂಗಳೂರು ಮುಳುಗಿರುವುದು, ರಸ್ತೆಗಳು ಗುಂಡಿಮಯವಾಗಿರುವುದು ಎಂದು ಟೀಕಿಸಿದೆ.
ಇದನ್ನೂ ಓದಿ:ಜನಸ್ಪಂದನ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಎಂಟಿಬಿ, ವಿಶ್ವನಾಥ್
ಶೇ.50ರಷ್ಟು ಕಮಿಷನ್ ಇರುವಾಗ ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಪೈಪೋಟಿ ನಡೆಯದಿರುತ್ತದೆಯೇ?. ಯಾವ ಕಾರಣಕ್ಕಾಗಿ ಈ ಸಂತೋಷ, ಸಡಗರ, ಸಂಭ್ರಮ ಬಿಜೆಪಿ?. ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ?. ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿರುವುದಕ್ಕಾ?. ಸರ್ಕಾರಿ ಹುದ್ದೆಗಳು ಲಾಭದಾಯಕವಾಗಿ ಸೇಲ್ ಆಗಿರುವುದಕ್ಕಾ?. ಶೇ.40ರಷ್ಟು ಕಮಿಷನ್ ಲೂಟಿಯನ್ನು ಯಶಸ್ವಿಯಾಗಿ ಮಾಡುತ್ತಿರುವುದಕ್ಕಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಆಡಳಿತದಲ್ಲಿ ಸರ್ಕಾರದ ಸ್ಪಂದನೆ ಇಲ್ಲದೇ ಜನರ ರೋಧನೆ ನಡೆಯುತ್ತಿದೆ. ಅರವಿಂದ್ ಲಿಂಬಾವಳಿ, ಮಾಧುಸ್ವಾಮಿ ಅವರಂತವರಿಂದ ಜನರ ನಿಂದನೆ ನಡೆಯುತ್ತಿದೆ. ನೆರೆ, ಪ್ರವಾಹ, ಬೆಲೆ ಏರಿಕೆಯಂತವುಗಳಿಂದ ಜನರ ವೇದನೆ ನೋಡುತ್ತಿದ್ದೇವೆ. ಬಿಜೆಪಿ ಸಮಾವೇಶಕ್ಕೆ ಜನವೇದನೆ ಮತ್ತು ಜನರೋಧನೆ ಹೆಸರುಗಳೇ ಸೂಕ್ತ ಎಂದು ವಾಗ್ದಾಳಿ ನಡೆಸಿದೆ.
ಬಿಜೆಪಿಯದ್ದು ಮೋಜಿನ ನರ್ತನೆ:ರಾಜ್ಯದಲ್ಲಿ ಮಳೆಯ ರುದ್ರನರ್ತನೆ, ಸಂತ್ರಸ್ತರ ನೋವಿನ ರೋಧನೆ, ಬಿಜೆಪಿಯದ್ದು ಮೋಜಿನ ನರ್ತನೆ ಎಂದೂ ಕಾಂಗ್ರೆಸ್ ಟೀಕಿಸಿದೆ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ!. ಅತ್ತ ಜನತೆ ಕಣ್ಣೀರಲ್ಲಿ ಕೈತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ ಬಿಜೆಪಿ ಸರ್ಕಾರ. ಇದು ಲಜ್ಜೆಗೇಡಿತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದೆ.
ಇನ್ನೂ ಸಂಪುಟ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ, ಜೀವ ಬಿಟ್ಟ ತಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕುಟುಂಬದ ಕಣ್ಣೀರು ಆರಿಲ್ಲ. ತಮ್ಮವರ ಸಾವುಗಳೇ ಬಿಜೆಪಿಗೆ ಕೊಂಚವೂ ಬೇಸರ ಮೂಡಿಸಿಲ್ಲ ಎಂದಾದರೆ ಜನರ ನೋವಿಗೆ ಮರುಕಪಡುವರೆ?. ಬಿಜೆಪಿಗೆ ಕನಿಷ್ಠ ಅಂತಃಕರಣವಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡಲ್ಲ, 150 + ಸ್ಥಾನದೊಂದಿಗೆ ಮತ್ತೆ ನಮ್ದೆ ಸರ್ಕಾರ: ಯಡಿಯೂರಪ್ಪ