ಬೆಂಗಳೂರು:ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದ್ದು, ಇಂದು ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 24 ಸಚಿವರು ಪದಗ್ರಹಣ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು.
ಕಳೆದ ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಮತ್ತು ಇವರ ಜೊತೆ ಸಂಪುಟ ಸಚಿವರಾಗಿ 8 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು. ಇದರಿಂದಾಗಿ ಈಗ ಸಿಎಂ, ಡಿಸಿಎಂ ಸೇರಿದಂತೆ ಒಟ್ಟು 34 ಸಚಿವರ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿದೆ. ನೂತನ ಸಚಿವರು ತಮ್ಮ ಕುಟುಂಬ ಸದಸ್ಯರ ಜೊತೆ ರಾಜಭವನಕ್ಕೆ ಆಗಮಿಸಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳು ರಾಜಭವನ ರಸ್ತೆಯ ಇಕ್ಕೆಲದಲ್ಲೂ ನಿಂತು ಡಿಜಿಟಲ್ ಡಿಸ್ಪ್ಲೇ ಮೂಲಕ ಸಮಾರಂಭವನ್ನು ವೀಕ್ಷಿಸಿದರು.
ಯಾರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ?:ಗದಗ ಶಾಸಕ ಎಚ್ ಕೆ ಪಾಟೀಲ್, ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ, ಪಿರಿಯಾಪಟ್ಟಣ ಶಾಸಕ ಕೆ. ವೆಂಕಟೇಶ್, ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ, ಮುಧೋಳ ಶಾಸಕ ಆರ್ ಬಿ ತಿಮ್ಮಾಪುರ್, ದಾವಣಗೆರೆ ಉತ್ತರ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ್, ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಶಹಾಪೂರ ಶಾಸಕ ಶರಣಬಸಪ್ಪ ಬಾಪೂಗೌಡ ದರ್ಶನಾಪುರ್, ಸೇಡಂ ಶಾಸಕ ಶರಣಪ್ರಕಾಶ್ ಪಾಟೀಲ್, ಭಟ್ಕಳ ಶಾಸಕ ಮಾಂಕಾಳು ವೈದ್ಯ, ಕಲಘಟಗಿ ಶಾಸಕ ಸಂತೋಷ್ ಲಾಡ್, ಎಐಸಿಸಿ ಕಾರ್ಯದರ್ಶಿ ಎನ್. ಎಸ್. ಬೋಸರಾಜು, ಹೆಬ್ಬಾಳ ಶಾಸಕ ಭೈರತಿ ಸುರೇಶ್, ಸೊರಬ ಶಾಸಕ ಮಧು ಬಂಗಾರಪ್ಪ, ಚಿಂತಾಮಣಿ ಶಾಸಕ ಎಂ ಸಿ ಸುಧಾಕರ್ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.