ಬೆಂಗಳೂರು: ಲಿಂಗಾಯತ ಸಮುದಾಯ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಟ್ವೀಟ್ ವಾರ್ ಜೋರಾಗಿದೆ. ಕಾಂಗ್ರೆಸ್ನವರು ಟ್ವೀಟ್ ಮಾಡುವ ಮೂಲಕ ಬಿಜೆಪಿ ಲಿಂಗಾಯತ ವಿರೋಧಿಯಾಗಿದೆ ಎಂದು ಆರೋಪಿಸುತ್ತಿದ್ದು, ಅದಕ್ಕೆ ಬಿಜೆಪಿ ರೀಟ್ವೀಟ್ ಮೂಲಕ ತಿರುಗೇಟು ನೀಡಿದೆ.
ವೀರಶೈವ ಲಿಂಗಾಯತ ಸಮುದಾಯದವರಿಗೆ ಬಿಜೆಪಿಯಿಂದ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಬಾಯಿ ಬಡಿದುಕೊಳ್ಳುತ್ತಿರುವ ಕಾಂಗ್ರೆಸ್ನಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಆಗಿರುವ ಅನ್ಯಾಯ ಮರೆಮಾಚುವ ಕಸರತ್ತಅನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದು ಕೌಂಟರ್ ಕೊಟ್ಟಿದೆ.
ವೀರಶೈವ ಲಿಂಗಾಯತ ನಾಯಕರಾಗಿದ್ದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ನಿಂದ ಆಗಿರುವ ಘೋರ ಅವಮಾನವನ್ನು ವೀರಶೈವ ಲಿಂಗಾಯತ ಸಮುದಾಯ ಎಂದೂ ಮರೆಯುವುದಿಲ್ಲ. ಬಿಜೆಪಿ ವೀರಶೈವ ಲಿಂಗಾಯತ ಸಮುದಾಯ ಹಾಗೂ ಸಮುದಾಯದ ಯಾವುದೇ ನಾಯಕರನ್ನು ಅಗೌರವದಿಂದ ನೋಡಿಲ್ಲ. ಬಿಜೆಪಿ ಪಕ್ಷ ಹಾಗೂ ಸರ್ಕಾರದಲ್ಲಿ ಲಿಂಗಾಯತ ಸಮುದಾಯದ ನಾಯಕರು ಉನ್ನತ ಸ್ಥಾನದಲ್ಲಿರುವುದು ಕಾಂಗ್ರೆಸ್ ಪಕ್ಷದ ಹೊಟ್ಟೆ ಉರಿಗೆ ಕಾರಣವಾದಂತಿದೆ ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ಗೆ ಈ ಬಾರಿಯೂ ತಕ್ಕ ಪಾಠ - ಬಿಜೆಪಿ ಟ್ವಿಟ್: ಒಂದು ಜಾಗೃತ ಸಮುದಾಯವನ್ನು ಎತ್ತಿ ಕಟ್ಟಲು ಕಾಂಗ್ರೆಸ್ ಎಷ್ಟೇ ಬೊಬ್ಬೆ ಹೊಡೆದರೂ ನಿಮ್ಮ ಅಪಪ್ರಚಾರಕ್ಕೆ ಮರುಳಾಗುವಷ್ಟು ದುರ್ಬಲ ಮನಸ್ಸಿನವರು ರಾಜ್ಯದಲ್ಲಿಲ್ಲ. ಧರ್ಮದ ಹೆಸರಿನಲ್ಲಿ ಸಮುದಾಯ ಒಡೆಯುವ ಭಂಡತನಕ್ಕೆ ಕಳೆದ ಚುನಾವಣೆಯಲ್ಲಿ ಜಾಗೃತ ವೀರಶೈವ ಲಿಂಗಾಯತ ಸಮುದಾಯ ತಕ್ಕ ಪಾಠ ಕಲಿಸಿದೆ. ಈ ಬಾರಿಯೂ ವೀರಶೈವ ಲಿಂಗಾಯತ ಸಮುದಾಯದ ವಿಚಾರದಲ್ಲಿ ಫೇಕ್ ಸುದ್ದಿಗಳ ಮೂಲಕ ಸಮುದಾಯಕ್ಕೆ ಅವಮಾನ ಮಾಡುತ್ತಿರುವ ಕಾಂಗ್ರೆಸ್ಗೆ ಈ ಬಾರಿಯೂ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟಾಂಗ್ ಕೊಟ್ಟಿದೆ.
ಲಿಂಗಾಯತ ವಿರೋಧಿ ಬಿಜೆಪಿ, ಕಾಂಗ್ರೆಸ್ ಟ್ವೀಟ್: 'ಲಿಂಗಾಯತರಿಗೆ ಬಿಜೆಪಿ ಕಚೇರಿಯಲ್ಲಿ ಪ್ರವೇಶವಿಲ್ಲ, ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ' ಎಂದು 3 ವರ್ಷದ ಹಿಂದೆಯೇ ಹೀಗೆ ಹೇಳಿದ್ದು ಬಿಜೆಪಿ ಕಾರ್ಯಕರ್ತ, ಬಿಎಸ್ ವೈ ಬೆಂಬಲಿಗ ಹೇಳಿದ್ದರು. ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಅವರ ಬೆಂಬಲಿಗರನ್ನು, ಲಿಂಗಾಯತರನ್ನು ಹೊರಗಿಟ್ಟಿದ್ದ ಬಿಜೆಪಿ ಈಗ ಲಿಂಗಾಯತರನ್ನು ಹಣಿಯುವ ಕೆಲಸ ಹೆಚ್ಚಿಸಿದೆ. ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ಆಕ್ರೋಶಗೊಂಡಿದೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಆರೋಪ ಮಾಡುತ್ತಿದೆ.
ನಾಗಪುರದ ಲಿಂಗಾಯತ ವಿರೋಧಿ ನೀತಿ ಅಳವಡಿಸಿಕೊಂಡಿರುವ ಸಿ.ಟಿ. ರವಿ ತಮ್ಮ ಕ್ಷೇತ್ರದ ಲಿಂಗಾಯತ ಸಮುದಾಯವಿರುವ ಪ್ರದೇಶಗಳನ್ನು ಕಡೆಗಣಿಸಿದ್ದಾರೆ ಎಂದು ಅಲ್ಲಿನ ಲಿಂಗಾಯತರೆ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ 'ಟಾರ್ಗೆಟ್ ಲಿಂಗಾಯತ' ಅಭಿಯಾನ ನಡೆಸಿದೆಯೇ?. ನಾಗಪುರದ ಅಜೆಂಡಾದಂತೆ ಗುಪ್ತವಾಗಿ ಲಿಂಗಾಯತರನ್ನು ಹಣಿಯಲು ಮುಂದಾಗಿದೆ ಬಿಜೆಪಿ. ಬಿ ಎಸ್ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸುವ ಮೂಲಕ ಈ ಅಜೆಂಡಾದ ಜಾರಿಗೆ ಚಾಲನೆ ಕೊಟ್ಟಂತಿದೆ. ಲಿಂಗಾಯತ ಸಮುದಾಯದ ಬಸವ ತತ್ವದ ವೈಚಾರಿಕ ಪ್ರಜ್ಞೆ ನಾಗಪುರಕ್ಕೆ ತತ್ವಕ್ಕೆ ವಿರುದ್ಧ ಇರುವುದರಿಂದ ಈ ಹುನ್ನಾರವೇ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಇದಕ್ಕೆ ಬಿಜೆಪಿ ಟ್ವಿಟ್ ಮೂಲಕ ಪ್ರತಿಕ್ರಿಯಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ನದ್ದು ಗ್ಯಾರಂಟಿ ಕಾರ್ಡ್ ಅಲ್ಲ ಬೋಗಸ್ ಕಾರ್ಡ್.. ನಿಮಗೆ ಕಾರ್ಡ್ ಕೊಟ್ರೆ ಬೆಂಕಿ ಹಚ್ಚಿ ಸುಟ್ಟು ಹಾಕಿ: ರೇಣುಕಾಚಾರ್ಯ