ಬೆಂಗಳೂರು: ಕಳೆದ ಬಾರಿ ಜಿದ್ದಾಜಿದ್ದಿಯ ಕ್ಷೇತ್ರವಾಗಿದ್ದ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಸ್ಪಷ್ಟವಾಗಿದೆ. ಹಳೆಯ ಹುರಿಯಾಳುಗಳೇ ಮತ್ತೊಮ್ಮೆ ಮುಖಾಮುಖಿಯಾಗಿದ್ದು, ವಿಜಯನಗರ ಅಖಾಡದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಕ್ಷೇತ್ರ ದಕ್ಕಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯಾಸಪಡುತ್ತಿದೆ.
ಬೆಂಗಳೂರಿನ ಹೃದಯ ಭಾಗದ ಪಕ್ಕದಲ್ಲೇ ಇರುವ ವಿಜಯನಗರ ಕ್ಷೇತ್ರ ಉತ್ತಮ ಸೌಕರ್ಯಗಳಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಮೆಟ್ರೋ ಸೇರಿದಂತೆ ಎಲ್ಲ ರೀತಿಯ ಸಂಪರ್ಕ, ಸುಸಜ್ಜಿತ ಬಡಾವಣೆಗಳು, ಶಾಪಿಂಗ್ ತಾಣಗಳು, ಗ್ರಂಥಾಲಯ, ಉದ್ಯಾನಗಳು, ಉತ್ತಮ ಶಿಕ್ಷಣ ಸಂಸ್ಥೆಗಳು, ಆಧುನಿಕ ಆಸ್ಪತ್ರೆಗಳು ಕ್ಷೇತ್ರದಲ್ಲಿವೆ. ಬಿಜೆಪಿಯ ಕಾರ್ಪೊರೇಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದರೂ ಕ್ಷೇತ್ರ ಮಾತ್ರ ಕಾಂಗ್ರೆಸ್ನ ಹಿಡಿತದಲ್ಲಿಯೇ ಇದೆ. ವಿಜಯನಗರ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿದೆ. ಅಭಿವೃದ್ಧಿ ಹೊಂದಿದ ಪ್ರದೇಶಗಳು, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಂದ ಕೂಡಿರುವ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಇರುವ ಕಣವಾಗಿದೆ.
ಮತದಾರರ ವಿವರ:ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 3,05,386 ಮತದಾರರಿದ್ದಾರೆ. ಇದರಲ್ಲಿ 1,60,151 ಪುರುಷ ಮತದಾರರು, 1,45,099 ಮಹಿಳಾ ಮತದಾರರಿದ್ದಾರೆ. ಪುರುಷ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ 51 ಸಾವಿರ ಒಕ್ಕಲಿಗ ಮತದಾರರಿದ್ದು, ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಮುಸ್ಲಿಂ ಮತಗಳು ಬಹಳ ಮಹತ್ವದದ್ದಾಗಿವೆ. ಇಲ್ಲಿ 17,500 ಲಿಂಗಾಯತ ಮತದಾರರು, 9 ಸಾವಿರ ಬ್ರಾಹ್ಮಣ ಮತದಾರರು, 38 ಸಾವಿರ ಒಬಿಸಿ, 42 ಸಾವಿರ ಎಸ್ಸಿ ಎಸ್ಟಿ, 37 ಸಾವಿರ ಮುಸ್ಲಿಂ, 35 ಸಾವಿರ ಇತರ ಮತದಾರರಿದ್ದಾರೆ.
2008, 2013, 2018 ಮೂರು ಬಾರಿಯೂ ಕಾಂಗ್ರೆಸ್ನಿಂದ ಎಂ ಕೃಷ್ಣಪ್ಪ ಸ್ಪರ್ಧಿಸಿ ಹ್ಯಾಟ್ರಿಕ್ ಜಯಭೇರಿ ಭಾರಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅನುಭವ ಇದೆ. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೃಷ್ಣಪ್ಪ ಪಾಲಿಗೆ ಶ್ರೀರಕ್ಷೆಯಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕ್ಷೇತ್ರದಲ್ಲಿ ಚಿರಪರಿಚಿತರಾಗಿ ಕ್ಷೇತ್ರದ ಜನರ ಜೊತೆ ಬೆರೆತು ಕ್ಷೇತ್ರದ ತುಂಬಾ ಸಂಚರಿಸಿಕೊಂಡಿದ್ದಾರೆ. ಹಿರಿಯ ನಾಯಕರಾಗಿರುವ ಕೃಷ್ಣಪ್ಪ ಅಪಾರ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು, ಕ್ಷೇತ್ರದ ತುಂಬಾ ಮಿಂಚಿನ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ತಾರಾ ಪ್ರಚಾರಕರ ಅನಿವಾರ್ಯತೆ ಇಲ್ಲದೇ ಸ್ವತಂತ್ರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕರು ಬಂದು ಪ್ರಚಾರ ನಡೆಸಿದ್ದು, ಕ್ಷೇತ್ರದ ತುಂಬಾ ಅಬ್ಬರದ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಕಳೆದ ಮೂರು ಚುನಾವಣೆಯಲ್ಲಿಯೂ ಬೇರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಬಿಜೆಪಿಗೆ ಗೆಲುವು ಸಿಕ್ಕಿಲ್ಲ. 2008 ರಲ್ಲಿ ಪ್ರಮಿಳಾ ನೇಸರ್ಗಿ, 2013 ರಲ್ಲಿ ವಿ ಸೋಮಣ್ಣ, 2018 ರಲ್ಲಿ ಹೆಚ್. ರವೀಂದ್ರ ಅವರನ್ನು ಕಣಕ್ಕಿಳಿಸಿತ್ತು. ಆದರೆ, ವಿಜಯ ಮಾಲೆ ಸಿಗಲಿಲ್ಲ. ಕಳೆದ ಬಾರಿ ಕೃಷ್ಣಪ್ಪರಿಗೆ ತೀವ್ರ ಪೈಪೋಟಿ ಒಡ್ಡಿ ಅತ್ಯಲ್ಪ ಮತಗಳ ಅಂತರದಲ್ಲಿ ರವೀಂದ್ರ ಪರಾಜಿತರಾಗಿದ್ದರು. ಒಂದು ಹಂತದಲ್ಲಿ ಕೃಷ್ಣಪ್ಪ ಸೋಲುವ ಭೀತಿಗೆ ಸಿಲುಕಿದ ಸನ್ನಿವೇಶವನ್ನೂ ಸೃಷ್ಟಿಸಿದ್ದರು. ಅವರಿಗೇ ಈ ಬಾರಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ನೀಡಿದೆ. ಹಾಗಾಗಿ ಕಳೆದ ಬಾರಿಯ ಎದುರಾಳಿಗಳೇ ಈ ಬಾರಿ ನೇರಾನೇರ ಸ್ಪರ್ಧೆಯಲ್ಲಿದ್ದಾರೆ.
ಕೃಷ್ಣಪ್ಪ ಅಬ್ಬರದ ಪ್ರಚಾರ ನಡೆಸುತ್ತಿದದರೆ ಬಿಜೆಪಿಯ ರವೀಂದ್ರ ಕೂಡ ಹಿಂದೆ ಬಿದ್ದಿಲ್ಲ. ಹಾಲಿ ಸಚಿವ ಪಕ್ಷದ ಕ್ಷೇತ್ರ ಗೋವಿಂದರಾಜನಗರ ಕ್ಷೇತ್ರದ ಶಾಸಕ ಸೋಮಣ್ಣ ನೆರವಿನಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದಾರೆ. ಸೋಮಣ್ಣ ಕೂಡ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿ ತೋರಿ ಕೆಲಸ ಮಾಡಿದ್ದಾರೆ. ಅಲ್ಲದೇ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಳೆದೆರಡು ಚುನಾವಣೆಯಲ್ಲಿ ತೀರಾ ಕಳಪೆ ಸಾಧನೆ ತೋರಿದ್ದ ಹಿನ್ನೆಲೆಯಲ್ಲಿ ಈ ಬಾರಿ ಅಭ್ಯರ್ಥಿ ಹಾಕುವ ಗೋಜಿಗೆ ಜೆಡಿಎಸ್ ಹೋಗಿಲ್ಲ ಹಾಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಪೈಪೋಟಿ ಇದೆ. ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಹೆಚ್ಚಾಗಿದೆ.