ಬೆಂಗಳೂರು:ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ನಾಳಿನ ಕರ್ನಾಟಕ ಬಂದ್ ರದ್ದುಗೊಂಡಿದೆ. ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಖಂಡಿಸಿ ಮಾರ್ಚ್ 9ರ ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಬಂದ್ ನಡೆಸುವ ಬಗ್ಗೆ ಕಾಂಗ್ರೆಸ್ನಿಂದ ಕರೆ ನೀಡಲಾಗಿತ್ತು.
"ನಾಳೆ ನಡೆಯಲಿರುವ ಬಂದ್ ರದ್ದು ಮಾಡಲು ನಿರ್ಧರಿಸಲಾಗಿದೆ. ಶಿಕ್ಷಣ ಸಂಸ್ಥೆಗಳ ಮನವಿ ಮೇರೆಗೆ ಕಾಂಗ್ರೆಸ್ ಘೋಷಿಸಿದ್ದ ಬಂದ್ ರದ್ದುಗೊಂಡಿದೆ. ಶಿಕ್ಷಣ ಸಂಸ್ಥೆಗಳು ತೊಂದರೆ ಆಗುತ್ತೆ ಎಂದು ಮನವಿ ಮಾಡಿದ್ದು ಅವರಿಗೆ ಬೆಲೆ ಕೊಟ್ಟು ನಿರ್ಧಾರ ಕೈಗೊಂಡಿದ್ದೇವೆ" ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, "ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಾಹನಗಳಿಗೆ ಅಡ್ಡಿಪಡಿಸದೇ ಅಂಗಡಿ ಮುಂಗಟ್ಟು ಮಾತ್ರ ಮುಚ್ಚಿ ಬಂದ್ ನಡೆಸಲು ಈ ಮುನ್ನ ತೀರ್ಮಾನಿಸಲಾಗಿತ್ತು. ಆದರೆ, ಪರೀಕ್ಷೆ ಬರೆಯುವವರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ರಾಜ್ಯ ಬಂದ್ ಕರೆಯನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಬಂದ್ ಬೇಡ ಎಂದು ಶಾಲಾ ಸಂಸ್ಥೆಗಳ ಒತ್ತಡ: "ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಮೂಲಕ ಕರೆ ಮಾಡಿದ್ದರು. ಸ್ಕ್ರೀನಿಂಗ್ ಕಮಿಟಿ ಆಗುವ ವೇಳೆ ಎಲ್ಲಾ ನಾಯಕರು ಸೇರಿ ಈ ನಿರ್ಧಾರ ಹೇಳಿದ್ದಾರೆ. ಹೀಗಾಗಿ ನಾಳೆ ಬಂದ್ ಇರುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಾಲಾ ಸಂಸ್ಥೆಗಳು ಬಂದ್ ಬೇಡ ಎಂದು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ನಾಯಕರು ಬಂದ್ ಮುಂದೂಡಿದ್ದಾರೆ. ಸ್ಕ್ರೀನಿಂಗ್ ಕಮಿಟಿ ಸಭೆ ಇದೆ, ಮುಗಿದ ಬಳಿಕ ಯಾವ ರೀತಿ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಕೆಶಿ ಸೂಚನೆ ಮೇರೆಗೆ ಬಂದ್ ಹಿಂಪಡೆದಿದ್ದೇವೆ" ಎಂದರು.
"ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಸಂಘವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ. ನ್ಯಾಯಾಂಗದ ಪ್ರಕ್ರಿಯೆ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಸರ್ಕಾರದ ಬೆಂಬಲ ಇಲ್ಲದೆ ಒಂದೇ ದಿನದಲ್ಲಿ ಜಾಮೀನು ಸಿಗುವುದಿಲ್ಲ. ಪ್ರತಿಪಕ್ಷದವರಿಗೆ ಈ ರೀತಿ ಬೇಲ್ ಸಿಗಲ್ಲ. ಮಾಡಾಳ್ಗೆ ಜಾಮೀನು ಸಿಗುವ ವಿಚಾರವಾಗಿ ಸರ್ಕಾರ ಶಾಮೀಲಾಗಿದೆ" ಎಂದು ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದರು.