ಕರ್ನಾಟಕ

karnataka

ETV Bharat / state

ಚುನಾವಣೆಗೆ ದಿನ ದೂರವಿರುವಾಗಲೇ ಕಾಂಗ್ರೆಸ್​ನಿಂದ ವಿಧಾನಸಭೆಯತ್ತ ಹಲವರ ಚಿತ್ತ

ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರಮುಖ ನಾಯಕರು ಮುಂದಿನ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಎಂಬ ಸಂಕಲ್ಪ ತೊಟ್ಟಿದ್ದು, ಸುರಕ್ಷಿತ ಕ್ಷೇತ್ರವನ್ನು ಈಗಾಗಲೇ ಹುಡುಕಲು ಆರಂಭಿಸಿದ್ದಾರೆ..

Congress
ಕಾಂಗ್ರೆಸ್

By

Published : Dec 28, 2021, 6:26 PM IST

ಬೆಂಗಳೂರು :ವಿಧಾನಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳ ನಿರೀಕ್ಷೆ ಗರಿಗೆದರಿದೆ.

ಸಾಕಷ್ಟು ನಾಯಕರು ತಮ್ಮ ಕ್ಷೇತ್ರ ಬದಲಿಸುವ ಪ್ರಯತ್ನ ನಡೆಸಿದ್ದರೆ, ಕೆಲ ವಿಧಾನಪರಿಷತ್ ಸದಸ್ಯರು ಮರು ಆಯ್ಕೆ ಸ್ಪರ್ಧಿಸದೆ ವಿಧಾನಸಭೆಯತ್ತ ದೃಷ್ಟಿ ನೆಟ್ಟಿದ್ದಾರೆ. ಇನ್ನೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಸೋಲುವ ಭೀತಿ ಎದುರಿಸುತ್ತಿರುವ ಕೆಲ ಕಾಂಗ್ರೆಸ್ ನಾಯಕರು ಸುರಕ್ಷಿತ ಕ್ಷೇತ್ರದತ್ತ ಗಮನ ಹರಿಸಿದ್ದಾರೆ.

ಮಾಜಿ ಡಿಸಿಎಂ ಜಿ. ಪರಮೇಶ್ವರ್

ಬಿಜೆಪಿ ಸರ್ಕಾರದ ವೈಫಲ್ಯವನ್ನು ಮುಂದಿಟ್ಟು 2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಅದೇ ಆಧಾರದ ಮೇಲೆ 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಕನಸು ಹೊತ್ತಿರುವ ಅಭ್ಯರ್ಥಿಗಳ ಸಂಖ್ಯೆ ಸಹ ಕಾಂಗ್ರೆಸ್​ನಲ್ಲಿ ಸಾಕಷ್ಟಿದೆ.

ಅತ್ಯಂತ ಪ್ರಮುಖವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹೆಸರುಗಳು ಚಾಲ್ತಿಯಲ್ಲಿವೆ. ಇನ್ನೂ ಯುವ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಹೈಕಮಾಂಡ್ ಕಡೆಯಿಂದ ಇರುವುದರಿಂದ ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ ಮತ್ತಿತರ ನಾಯಕರು ಸಹ ತಮ್ಮದೇ ಆದ ನಿರೀಕ್ಷೆಯೊಂದಿಗೆ ಓಡಾಡುತ್ತಿದ್ದಾರೆ.

ಆದರೆ, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರಮುಖ ನಾಯಕರು ಮುಂದಿನ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಎಂಬ ಸಂಕಲ್ಪ ತೊಟ್ಟಿದ್ದು, ಸುರಕ್ಷಿತ ಕ್ಷೇತ್ರವನ್ನು ಈಗಾಗಲೇ ಹುಡುಕಲು ಆರಂಭಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಅತ್ಯಂತ ಪ್ರಮುಖವಾಗಿ ಪ್ರತಿಪಕ್ಷನಾಯಕ ಸಿದ್ದರಾಮಯ್ಯಗೆ ಒಂದು ಸೂಕ್ತ ಕ್ಷೇತ್ರದ ಹುಡುಕಾಟ ನಡೆದಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡು ತವರು ಜಿಲ್ಲೆಯಲ್ಲಿ ಅಪಮಾನಕ್ಕೆ ಒಳಗಾಗಿದ್ದ ಸಿದ್ದರಾಮಯ್ಯ ಅವರನ್ನು ಬಾದಾಮಿ ಮತದಾರರು ಕೈ ಹಿಡಿದಿದ್ದರು.

ಅತ್ಯಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದ ಸಿದ್ದರಾಮಯ್ಯಗೆ ಬಾದಾಮಿ ಕ್ಷೇತ್ರದ ಜನ ಕೈಹಿಡಿಯುವ ಅನುಮಾನ ಇದೆ. ಅಲ್ಲದೆ, ಈ ಹಿಂದೆ ಅಲ್ಲಿ ಅಭ್ಯರ್ಥಿಯಾಗಿ ಗೆದ್ದಿದ್ದ ಬಿ. ಬಿ ಚಿಮ್ಮನಕಟ್ಟಿ ಸಹ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಈ ಸಾರಿಯೂ ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಿದರೆ ಚಿಮ್ಮನಕಟ್ಟಿ ರೆಬೆಲ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಸಹ ಇದೆ. ಇನ್ನೊಮ್ಮೆ ಮುಖ್ಯಮಂತ್ರಿ ಆಗುವ ಕನಸು ಹೊಂದಿರುವ ಸಿದ್ದರಾಮಯ್ಯ ಬಾದಾಮಿ, ಚಾಮರಾಜಪೇಟೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಮುಸಲ್ಮಾನ್ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಗೂ ತಮ್ಮ ಆಪ್ತ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅತ್ಯಂತ ಉತ್ತಮ ಹಿಡಿತ ಸಾಧಿಸಿರುವ ಕ್ಷೇತ್ರವಾಗಿರುವ ಚಾಮರಾಜಪೇಟೆಯಿಂದ ಸ್ಪರ್ಧಿಸಿದರೆ ಗೆಲುವು ಖಚಿತ ಎಂಬ ವಿಶ್ವಾಸ ಇದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಇನ್ನೊಂದೆಡೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸಿದ್ದರಾಮಯ್ಯ ವಿರುದ್ಧ ಗೆಲುವು ಸಾಧಿಸಿದ್ದ ಜಿ. ಟಿ ದೇವೇಗೌಡ ಕಾಂಗ್ರೆಸ್​ನತ್ತ ಮುಖ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಈ ಕ್ಷೇತ್ರ ಬಿಟ್ಟುಕೊಟ್ಟು ತಮ್ಮ ಪುತ್ರನಿಗೆ ಮೈಸೂರಿನಿಂದ ಕಾಂಗ್ರೆಸ್ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಯಾವುದೇ ಕಾರಣಕ್ಕೂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹಿಂದಿರುಗುವ ಆಸೆ ಹೊಂದಿರದ ಸಿದ್ದರಾಮಯ್ಯ ತುಂಬಾ ಬಲವಂತ ಎದುರಾದರೆ ಮೈಸೂರಿನ ಪ್ರತಿಷ್ಠಿತ ಕ್ಷೇತ್ರವಾಗಿರುವ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲೂಬಹುದು ಎನ್ನಲಾಗುತ್ತಿದೆ.

ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರು ಕೊರಟಗೆರೆ ಬದಲು ಬೇರೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಎಂಬ ಮಾಹಿತಿ ಇದೆ. ಅವರು ಸಹ ಬೆಂಗಳೂರು ನಗರದ ಮೇಲೆ ಆಸಕ್ತಿ ಹೊಂದಿದ್ದಾರೆ. ಪುಲಕೇಶಿ ನಗರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಇದೆ.

ಇವರ ಬೆಂಬಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಸಹ ನಿಂತಿದ್ದಾರೆ ಎಂಬ ಮಾಹಿತಿ ಇದೆ. 2013ರ ಚುನಾವಣೆಯಲ್ಲಿ ಸೋತು 2018ರಲ್ಲಿ ಗೆಲುವು ಸಾಧಿಸಿದ್ದರು ಆತಂಕ ಎದುರಾಗಿದೆ. ಈ ಹಿನ್ನೆಲೆ ಅವರು ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದಾರೆ.

ಇನ್ನು ವಿಧಾನಪರಿಷತ್ ಚುನಾವಣೆಯಲ್ಲಿ ಈ ಸಾರಿ ಸ್ಪರ್ಧಿಸಲು ನಿರಾಕರಿಸಿದ ಮುಖಂಡರುವಿಧಾನಸಭೆ ಚುನಾವಣೆಗೆ ಪ್ರಯತ್ನ ನಡೆಸಿದ್ದಾರೆ. ಚಿತ್ರದುರ್ಗದ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಿ ಅವರಿಗೆ ಗೆಲುವು ಸಾಧಿಸಿದ್ದ ರಘು ಆಚಾರ್ ಈ ಸಾರಿ ವಿಧಾನಸಭೆ ಚುನಾವಣೆಯತ್ತ ಆಶಯ ಹೊಂದಿದ್ದು, ಬೆಂಗಳೂರು ನಗರದ ರಾಜಾಜಿನಗರ ಇಲ್ಲವೇ ಮಲ್ಲೇಶ್ವರದಿಂದ ಕಣಕ್ಕಿಳಿಯುವ ಆಶಯವನ್ನು ಪಕ್ಷದ ನಾಯಕರ ಮುಂದೆ ವ್ಯಕ್ತಪಡಿಸಿದ್ದಾರೆ.

ಇನ್ನು ಮಾಜಿ ಸಿಎಂ ಧರಂಸಿಂಗ್ ಪುತ್ರ ವಿಜಯ್ ಸಿಂಗ್ ಬೀದರ್ ಜಿಲ್ಲೆಯ ಬಸವಕಲ್ಯಾಣದ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆರ್. ಧರ್ಮಸೇನ ಮೈಸೂರಿನ ಯಾವುದಾದರೂ ಕ್ಷೇತ್ರ ಹಾಗೂ ಬಸವರಾಜ ಪಾಟೀಲ್ ಇಟಗಿ ರಾಯಚೂರಿನ ಯಾವುದಾದರೂ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಆಶಯ ಹೊಂದಿದ್ದಾರೆ.

ಈ ರೀತಿ ಪಟ್ಟಿ ಸಾಕಷ್ಟು ಉದ್ದವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ಹಲವು ಕಾಂಗ್ರೆಸ್ ನಾಯಕರದ್ದಾಗಿದೆ. ಹೇಗಾದರೂ ಗೆದ್ದು ಸರ್ಕಾರದ ಭಾಗವಾಗಲು ಈಗಿನಿಂದಲೇ ಪ್ರಯತ್ನ ಆರಂಭಿಸಿದ್ದಾರೆ. ಮತದಾರರು ಅವರ ಕೈಹಿಡಿಯಲಿದ್ದಾರೆಯೇ? ಎನ್ನುವುದನ್ನು ಕಾದು ನೋಡಬೇಕಿದೆ.

ಓದಿ:ಮಹಿಳೆಯ ಶವ ಹುಡುಕಲು ಹೋದ ಪೊಲೀಸರಿಗೆ ಸಿಕ್ಕಿದ್ದು ವೃದ್ಧನ ಶವ..

For All Latest Updates

TAGGED:

ABOUT THE AUTHOR

...view details