ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರಿದೆ. ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಈ ಮಧ್ಯೆ ಚಿತ್ರದುರ್ಗದ ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಕಾಂಗ್ರೆಸ್ ನೇಮಿಸಿದೆ. ಧ್ರುವನಾರಾಯಣ್ ಅಗಲಿಕೆ ಬಳಿಕ ಅವರ ಸ್ಥಾನ ತುಂಬಲು ಹಲವು ಸಮುದಾಯದ ನಾಯಕರ ಪೈಪೋಟಿ ಏರ್ಪಟ್ಟಿತ್ತು. ಆದ್ರೆ ಅಂತಿಮವಾಗಿ ಚಂದ್ರಪ್ಪರನ್ನು ಹೈಕಮಾಂಡ್ ನೇಮಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಚಂದ್ರಪ್ಪರನ್ನು ನೇಮಿಸಿ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್ ಧ್ರುವನಾರಾಯಣ ಅವರು ಹೃದಯಾಘಾತದಿಂದ ಮಾರ್ಚ್ 11 ರಂದು ನಿಧನರಾದ ಹಿನ್ನೆಲೆ ತೆರವಾದ ಸ್ಥಾನಕ್ಕೆ ಚಿತ್ರದುರ್ಗದ ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಅವರನ್ನು ನೇಮಕ ಮಾಡಲಾಗಿದೆ. ಚಿತ್ರದುರ್ಗದಿಂದ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಪ್ಪಗೆ ಈ ಸಾರಿ ಟಿಕೆಟ್ ಸಿಕ್ಕಿಲ್ಲ. ಬದಲಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲಾಗಿದೆ.
ಚಂದ್ರಪ್ಪ ಬೆಳವಣಿಗೆ:2001 - 2003 ಕರ್ನಾಟಕ ರಾಜ್ಯ ಲಿಡ್ಕರ್ ಬೋರ್ಡ್ ಚೇರಮನ್‌ರಾಗಿ ಸೇವೆ ಸಲ್ಲಿಸಿದ್ದ ಚಂದ್ರಪ್ಪ, 1991 - 1992 ಚಿಕ್ಕಮಗಳೂರು ಜಿಲ್ಲಾ ಪರಿಷದ್ ಉಪಾಧ್ಯಕ್ಷರಾಗಿ (ರಾಜ್ಯ ಸಚಿವ ದರ್ಜೆ) ಕಾರ್ಯ ನಿರ್ವಹಿಸಿದ್ದಾರೆ. 1986 - 1991 ಈ ಅವಧಿಯಲ್ಲಿ ಬಿ.ಎನ್. ಚಂದ್ರಪ್ಪನವರು ಚಿಕ್ಕಮಗಳೂರು ಜಿಲ್ಲಾ ಪರಿಷದ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2014ರ ಸೆ.1 ರಂದು ಕೃಷಿ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು 2014 ರಾಸಾಯನಿಕ ಹಾಗೂ ಗೊಬ್ಬರಗಳ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಅದೇ ವರ್ಷ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಚಿತ್ರದುರ್ಗದಿಂದ ಸ್ಪರ್ಧಿಸಿ ಬಿಜೆಪಿಯ ಜನಾರ್ದನ ಸ್ವಾಮಿ ಅವರನ್ನು ಸೋಲಿಸಿ 16ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಾರಾಯಣಸ್ವಾಮಿ ವಿರುದ್ಧ ಸೋಲನುಭವಿಸಿದ್ದರು.
ಕಾರ್ಯಾಧ್ಯಕ್ಷರಾಗಿ ನೇಮಕವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿ ಎನ್ ಚಂದ್ರಪ್ಪ ಅವರು ಹೀಗೆ ಬರೆದುಕೊಂಡಿದ್ದಾರೆ:'ಮಾತೇ ಬಾರದ ಸಂದರ್ಭ ಅನ್ನಿಸುತ್ತಿದೆ ! ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಳಹಂತದಿಂದ ಇಲ್ಲಿಯವರೆಗೂ ಬರೋದೆ ಒಂದು ಅದೃಷ್ಟ ಅಂದುಕೊಂಡಿದ್ದ ನನಗೆ, ಇನ್ನೂ ಹೆಚ್ಚಿನ ಜವಾಬ್ದಾರಿ ಸಿಕ್ಕಿರುವ ವಿಷಯ. ಇದಕ್ಕೆ ಕಾರಣ - ಪಕ್ಷ ನಿಷ್ಠೆ ಅನ್ನೋದೇ ಒಂದು ಗಟ್ಟಿಯ ವಿಷಯ. ಅಖಿಲ ಭಾರತ ಕಾಂಗ್ರೆಸ್ ಪಕ್ಷವು ಇಂದು ನನ್ನನ್ನು ಗುರುತಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಆದೇಶ ನನ್ನ ಕೈ ಸೇರಿದೆ. ಅತ್ಯಂತ ಜಾವಾಬ್ದಾರಿಯ ವಿಷಯ ಅನ್ನೋದ್ರಲ್ಲಿ ಎರಡು ಮಾತಿಲ್ಲಾ.