ಬೆಂಗಳೂರು: ಮತದಾರರಿಗೆ ತಲಾ 6 ಸಾವಿರ ರೂ. ನೀಡುವುದಾಗಿ ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಶಾಸಕ ರಿಜ್ವಾನ್ ಅರ್ಷದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮತ್ತಿತರರನ್ನು ಒಳಗೊಂಡ ನಿಯೋಗವು ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಕೆ ಮಾಡಿದೆ.
ರಾಜ್ಯ ಚುನಾವಣಾ ಆಯೋಗದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್ ನಿಯೋಗ ಬಿಜೆಪಿಯ ಚುನಾವಣಾ ಅಕ್ರಮಗಳ ಕುರಿತು ದೂರು ನೀಡಿದ್ದು, ನಿಯಂತ್ರಿಸುವಂತೆ ಕೋರಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಆಧಾರವಾಗಿ ಮಾಡಿಕೊಂಡ ಕಾಂಗ್ರೆಸ್ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ರಾಜ್ಯದ ಐದು ಕೋಟಿ ಮತದಾರರನ್ನು 30 ಸಾವಿರ ಕೋಟಿಗೆ ಖರೀದಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಸಂಚಿಗೆ ಸಿಎಂ ಬೊಮ್ಮಾಯಿ, ಬಿಜೆಪಿ ಕೇಂದ್ರದ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರೇರಣೆ ನೀಡಿದ್ದಾರೆ. ಹಾಗಾಗಿ ಕೂಡಲೇ ಈ ಪ್ರಕರಣದ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
5 ಬೇಡಿಕೆಗಳೊಂದಿಗೆ ಆಯೋಗಕ್ಕೆ ದೂರು:ದೂರು ಸಲ್ಲಿಸಿದ ಬಳಿಕ ಮಾಜಿ ಸಂಸದ ವಿಎಸ್ ಉಗ್ರಪ್ಪ ಮಾತನಾಡಿ, ರಮೇಶ್ ಜಾರಕಿಹೊಳಿ ಪ್ರತಿ ಮತದಾರರಿಗೆ ತಲಾ 6 ಸಾವಿರ ರೂ. ಕೊಡುತ್ತೇವೆ ಎಂದಿದ್ದಾರೆ. ನಾವು ಈಗಾಗಲೇ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಆದರೆ, ಪೊಲೀಸರು ಈಗಲೂ ಕಾನೂನು ಸಲಹೆ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಚುನಾವಣೆ ಆಯೋಗಕ್ಕೆ ಸಂಬಂಧಿಸಿದ ವಿಷಯ ಎಂದಿದ್ದಾರೆ. ಹೀಗಾಗಿ ಪ್ರಮುಖವಾಗಿ 5 ಬೇಡಿಕೆಗಳೊಂದಿಗೆ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಸಂಪೂರ್ಣ ತನಿಖೆ ನಡೆಸಬೇಕು.
ವಜಾಗೊಳಿಸವಂತೆ ಆಗ್ರಹ:ಇದಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ, ನಡ್ಡಾ, ಕಟೀಲ್, ಬೊಮ್ಮಾಯಿ ಮೇಲೆ ಎಫ್ಐಆರ್ ದಾಖಲಿಸಲು ಆಯೋಗ ಸೂಚನೆ ಕೊಡಬೇಕು. ರಮೇಶ್ ಜಾರಕಿಹೊಳಿ ಹಾಗೂ ಸಿಎಂ ಬೊಮ್ಮಾಯಿ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಲು ನೋಟಿಸ್ ಕೊಡಬೇಕು. ಜೊತೆಗೆ ನಡ್ಡಾ ಹಾಗೂ ಕಟೀಲ್ ಅವರಿಗೂ ನೋಟಿಸ್ ಕೊಟ್ಟು ಎಂಪಿ ಸ್ಥಾನದಿಂದ ವಜಾ ಮಾಡಬೇಕು. 30 ಸಾವಿರ ಕೋಟಿ ರೂ. ಹಣದ ಹಿನ್ನೆಲೆಯ ತನಿಖೆಗೆ ಐಟಿ ಇಲಾಖೆಗೆ ಸೂಚಿಸಬೇಕು. ನ್ಯಾಯ ಸಮ್ಮತ ಚುನಾವಣೆ ಪಡೆಯಬೇಕೆಂದು ಆಯೋಗಕ್ಕೆ ಮನವಿ ಕೊಟ್ಟಿದ್ದೇವೆ ಎಂದರು.