ಬೆಂಗಳೂರು :ಚಡ್ಡಿ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ನಾಯಕರ ತಿಕ್ಕಾಟ ಮುಂದುವರಿದಿದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಟ್ವೀಟ್ ಮೂಲಕ ತನ್ನ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್, ಕೆ.ಎಸ್. ಈಶ್ವರಪ್ಪ ಅವರ ಭ್ರಷ್ಟಾಚಾರದ ಬೆಂಕಿ ರಾಜ್ಯವನ್ನಷ್ಟೇ ಅಲ್ಲ, ಗುತ್ತಿಗೆದಾರರ ಬದುಕನ್ನೇ ಸುಟ್ಟಿದೆ. 'ಚಡ್ಡಿ' ಅಂದರೆ ಬಿಜೆಪಿಗರಿಗೆ ಏಕಿಷ್ಟು ಅಮರಪ್ರೇಮ? ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ? ಚಡ್ಡಿಗೆ ಬಿಜೆಪಿ ಪೇಟೆಂಟ್ ಇದೆಯಾ? ಅಥವಾ ಚಡ್ಡಿಯನ್ನೇ ಬಿಜೆಪಿ ಧ್ವಜವನ್ನಾಗಿ ಸ್ವೀಕರಿಸಿದೆಯಾ..? ಎಂದು ಟ್ವೀಟ್ ಮಾಡಿದೆ.
ಚಡ್ಡಿ ವಿಚಾರವಾಗಿ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಯನ್ನು ಖಂಡಿಸಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇಂದು ಟ್ವೀಟ್ ಮಾಡಿದ್ದು, ರಾವಣ, ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ. ಲಂಕೆಯೇ ಸುಟ್ಟು ಹೋಯಿತು. ಕಾಂಗ್ರೇಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ. ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ. ಆ ಕೆಲಸ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ. ಚಡ್ಡಿಗೆ ನೀವು ಬೆಂಕಿ ಹಚ್ಚಿ ನೋಡಿ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ. ಆರ್‌ಎಸ್‌ಎಸ್ ತಂಟೆಗೆ ಬರಬೇಡಿ. ಹುಷಾರ್ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.