ಬೆಂಗಳೂರು:ವಿಧಾನಸಭೆ ಚುನಾವಣೆ ದಿನಾಂಕಕ್ಕೂ ಮೊದಲೇ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಪ್ರಕಟಿಸುವುದಾಗಿ ತಿಳಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಭರವಸೆ ಇನ್ನೂ ಘೋಷಣೆಯಾಗಿಯೇ ಉಳಿದಿದೆ.
ಬರುವ ಚುನಾವಣೆಯಲ್ಲಿ ಗೆಲವು ಸಾಧಿಸಿ, ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವ ಆತ್ಮವಿಶ್ವಾಸ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನವೆಂಬರ್ ಅಂತ್ಯದೊಳಗೆ ಕಾಂಗ್ರೆಸ್ ಪಕ್ಷದ ಸುಮಾರು 100 ಜನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಆದರೆ, ಇದೀಗ ನವೆಂಬರ್ ಅಂತ್ಯಗೊಂಡು ಡಿಸೆಂಬರ್ ಮೊದಲ ವಾರ ಮುಗಿಯುತ್ತಾ ಬಂದರೂ ಕಾಂಗ್ರೆಸ್ ಪಟ್ಟಿ ಬಗ್ಗೆ ಯಾವುದೇ ಸುಳಿವಿಲ್ಲ.
ಕಳೆದ ತಿಂಗಳು ಚುನಾವಣೆಯಲ್ಲಿ ಟಿಕೆಟ್ ನೀಡಲು ಕಾಂಗ್ರೆಸ್ ಅರ್ಜಿಗಳನ್ನು ಆಹ್ವಾನಿಸಿತ್ತು. ಸಾವಿರಕ್ಕೂ ಹೆಚ್ಚೂ ಟಿಕೆಟ್ ಅಪೇಕ್ಷಿತರಿಂದ ಅರ್ಜಿಗಳನ್ನು ಸಂಗ್ರಹಿಸಿದೆ. ಈ ಪ್ರಕ್ರಿಯೆಯಿಂದಾಗಿ ಕಾಂಗ್ರೆಸ್ ಪಕ್ಷವು ಭರವಸೆ ನೀಡಿದಂತೆ ನವೆಂಬರ್ ತಿಂಗಳ ಅಂತ್ಯದೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟ ಮಾಡಬಹುದು ಎನ್ನುವ ನಿರೀಕ್ಷೆ ಟಿಕೆಟ್ ಆಕಾಂಕ್ಷಿಗಳಲ್ಲಿ ಮೂಡಿತ್ತು. ಆದರೆ, ಡಿಸೆಂಬರ್ ಮೊದಲ ವಾರ ಪೂರ್ಣಗೊಳ್ಳುತ್ತಾ ಬಂದರೂ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡದಿರುವುದು, ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ.
ಭರವಸೆಯಾಗಿಯೇ ಉಳಿದ ಜೆಡಿಎಸ್ ಮಾತು:ಜೆಡಿಎಸ್ನ ವರಿಷ್ಠರಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಪಕ್ಷದ ಸುಮಾರು 120 ಅಭ್ಯರ್ಥಿಗಳ ಪಟ್ಟಿಯನ್ನು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುನ್ನವೇ ಘೋಷಣೆ ಮಾಡುವುದಾಗಿ ಹೇಳಿದ್ದರು. ಕಳೆದ ಜನವರಿ ತಿಂಗಳ ಸಂಕ್ರಾಂತಿ ಹಬ್ಬದ ವೇಳೆಗೆ ಮೊದಲ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಪಕ್ಷದ ಕಾರ್ಯಕರ್ತರಿಗೆ, ಮುಖಂಡರುಗಳಿಗೆ ಸಂದೇಶ ನೀಡಿದ್ದರು. ಆದರೆ, ಈ ಭರವಸೆಗೆ ಒಂದು ವರ್ಷ ತುಂಬುತ್ತ ಬಂದರೂ ಇದುವರೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿಲ್ಲ. ಒಂದಿಲ್ಲೊಂದು ನೆಪವೊಡ್ಡಿ ಅಭ್ಯರ್ಥಿಗಳ ಪಟ್ಟಿ ಬಹಿರಂಗಪಡಿಸುವುದನ್ನು ಮುಂದೂಡುತ್ತಲೇ ಬರಲಾಗಿದೆ.
ಅಬ್ಬರದ ಪ್ರಚಾರದಲ್ಲಿ ಪಕ್ಷಗಳು:ಇತ್ತ ಆರು ತಿಂಗಳ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿವೆ. ಅಭ್ಯರ್ಥಿಗಳ ಘೋಷಣೆ ಮಾಡದೇ ಕೇವಲ ಭರವಸೆಯಲ್ಲಿಯೇ ಚುನಾವಣೆ ಪ್ರಚಾರ ನಡೆಸುತ್ತಿರುವ ಬಗ್ಗೆ ಟಿಕೆಟ್ ಆಕಾಂಕ್ಷಿಗಳಲ್ಲಿ ಬೇಸರವಿದೆ. ಚುನಾವಣೆಗೆ ಕನಿಷ್ಠ ಪಕ್ಷ 6 ತಿಂಗಳ ಮೊದಲೇ ಅಭ್ಯರ್ಥಿಗಳನ್ನ ಘೋಷಿಸಿದರೆ, ಮತದಾರ ಸೆಳೆದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬಹುದು ಎನ್ನುವುದು ಹಲವಯ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ.