ಬೆಂಗಳೂರು:ನಾಳೆಯಿಂದ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದ್ದು, ಇದರ ಬೆನ್ನಲ್ಲೇ ಮೈತ್ರಿ ಪಕ್ಷಗಳ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.
ಜೆಡಿಎಸ್-ಕಾಂಗ್ರೆಸ್ನಿಂದ ವಿಪ್ ಜೆಡಿಎಸ್ನ 37 ಶಾಸಕರು ಹಾಗೂ ಕಾಂಗ್ರೆಸ್ನ ಎಲ್ಲ ಶಾಸಕರಿಗೂ ವಿಪ್ ಜಾರಿ ಮಾಡಲಾಗಿದ್ದು, ಸದನದಲ್ಲಿ ಹಾಜರಿರಬೇಕು ಮತ್ತು ಸರ್ಕಾರದ ಪರವಾಗಿ ಮತ ಚಲಾಯಿಸಬೇಕು. ಒಂದು ವೇಳೆ ಸದನಕ್ಕೆ ಗೈರು ಹಾಜರಾದರೆ ಹಾಗೂ ಹಾಜರಿದ್ದು ಸರಕಾರದ ವಿರುದ್ಧ ಮತ ಚಲಾಯಿಸಿದರೆ ಅನರ್ಹಗೊಳಿಸಲಾಗುವುದು ಎಂದು ವಿಪ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
ಜೆಡಿಎಸ್ ಶಾಸಕರಿಗೆ ಜೆಡಿಎಲ್ಪಿ ಮುಖಂಡ ಕುಮಾರಸ್ವಾಮಿ ವಿಪ್ ಜಾರಿ ಮಾಡಿದ್ದಾರೆ. ಅಧಿವೇಶಕ್ಕೆ ಹಾಜರಾಗದಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದರ ಮಧ್ಯೆ ವಿಧಾನಸಭೆಯ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಎಲ್ಲ ಶಾಸಕರ ಕೊಠಡಿಗೆ ವಿಪ್ ನೋಟಿಸ್ ಅಂಟಿಸಲಾಗಿದೆ ಎಂದು ತಿಳಿದು ಬಂದಿದೆ. ಅಧಿವೇಶನದ ಕಲಾಪ ನಡೆಯುವಾಗ ಯಾವುದೇ ಸಂದರ್ಭದಲ್ಲಿ ಮಂಡನೆಯಾಗುವ ಹಣಕಾಸು ಮಸೂದೆಗಳು, ಶಾಸನಗಳು ಹಾಗು ಇತರೆ ಕಲಾಪಗಳಲ್ಲಿ ಭಾಗವಹಿಸಿ " ಸರಕಾರದ ಪರ ಕಡ್ಡಾಯವಾಗಿ ಮತ " ಚಲಾವಣೆ ಮಾಡಬೇಕೆಂದು ವಿಪ್‌ನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಇಂದು ಅತೃಪ್ತ 11 ಶಾಸಕರು ಖುದ್ದಾಗಿ ರಾಜೀನಾಮೆ ನೀಡಲು ಸ್ಪೀಕರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿದ್ದರು. ಈ ವೇಳೆಯೇ ಅತೃಪ್ತರ ಕೈಗೆ ವಿಪ್ ನೀಡಲು ಮುಖಂಡರು ಸಕಲ ತಯಾರಿ ನಡೆಸಿದ್ದರು. ಆದರೆ ತರಾತುರಿಯಲ್ಲಿ ಅವರು ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಅತೃಪ್ತ ಶಾಸಕರ ಮನೆಗೆ ವಿಪ್ ನೋಟಿಸ್ ತಲುಪಿಸುವ ಕೆಲಸ ಸಹ ನಡೆದಿದೆ ಎಂದು ತಿಳಿದು ಬಂದಿದೆ.