ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಕೆಪಿಸಿಸಿ ಮುಂಭಾಗದಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಸಿದ್ದರಾಮಯ್ಯ ವಿರೋಧಿಸಿ ಪ್ರತಿಭಟನೆ ನಡೆಸಿದ ಅವರು, ಇತ್ತೀಚೆಗೆ ಸಿದ್ದರಾಮಯ್ಯ ನಡವಳಿಕೆ ಸರಿಯಿಲ್ಲ. ಎಲ್ಲವೂ ನಾನೇ, ಎಲ್ಲವೂ ನನ್ನಿಂದಲೇ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ನಾಲ್ವರು ಕಾರ್ಯಾಧ್ಯಕ್ಷರ ನೇಮಕಕ್ಕೆ ಹಠ ಹಿಡಿದಿದ್ದಾರೆ. ಸಿದ್ದರಾಮಯ್ಯ ವರ್ತನೆ ಸರಿಯಿಲ್ಲ. ಎಲ್ಲ ಅಧಿಕಾರ ಅನುಭವಿಸಿ ಉಳಿದ ನಾಯಕರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯಗೆ ಪಕ್ಷದಲ್ಲೇ ಶುರುವಾಯ್ತು ವಿರೋಧದ ಅಲೆ..! ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಲರಾಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೆಪಿಸಿಸಿಗೆ ಒಬ್ಬ ಚುರುಕಾಗಿ ಕಾರ್ಯನಿರ್ವಹಿಸುವ ನಾಯಕರನ್ನು ಕೂಡಲೇ ನೇಮಿಸಿ. ಸಿದ್ದರಾಮಯ್ಯ ಪಕ್ಷಕ್ಕೆ ಹಿತವಾಗುವಂತ ಕೆಲಸ ಮಾಡಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡಿದರು. ವಿಶ್ವನಾಥ್, ಕೆ.ಎಸ್ ಈಶ್ವರಪ್ಪ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಬಲರಾಮ್ ಮಾತನಾಡಿ, ಸಿದ್ದರಾಮಯ್ಯ ನಡೆ ನಮಗೆ ಅಸಮಾಧಾನ ತಂದಿದೆ. ಅವರಿಗೆ ನಾವು ಸಂಪೂರ್ಣ ಸಪೋರ್ಟ್ ಮಾಡಿದ್ದೇವೆ. ಆದರೆ ಈಗ ನಾಲ್ವರು ಕಾರ್ಯಾಧ್ಯಕ್ಷರ ಬೇಡಿಕೆ ಇಟ್ಟಿದ್ದಾರೆ. ಹೈಕಮಾಂಡ್ ಮುಂದೆ ಒತ್ತಡ ತರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾನೇ ಎಂದು ಓಡಾಡ್ತಿದ್ದಾರೆ. ಇವತ್ತು ಡಿಕೆಶಿ ಅವರನ್ನ ಅಧ್ಯಕ್ಷರನ್ನಾಗಿ ಮಾಡೋಕೆ ಹೈಕಮಾಂಡ್ ಹೊರಟಿದೆ. ಆದರೆ ಅದಕ್ಕೂ ಸಿದ್ದರಾಮಯ್ಯ ಅಡೆತಡೆ ಮಾಡ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗೋಕೆ ಸಿದ್ದರಾಮಯ್ಯ ಕಾರಣ. ಅತೃಪ್ತರನ್ನ ತಡೆಹಿಡಿಯೋಕೆ ಯಾಕೆ ಮುಂದಾಗಲಿಲ್ಲ ಎಂದೂ ದೂರಿದರು.