ಬೆಂಗಳೂರು : ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ 'ರಾಮಲಲ್ಲಾ' ಮೂರ್ತಿ ಆಯ್ಕೆಯಾಗಿದೆ. ಇದರ ಬೆನ್ನಲ್ಲೆ ಎಲ್ಲೆಡೆ ಅರುಣ್ ಯೋಗಿರಾಜ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲು ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ 'ರಾಮಲಲ್ಲಾ' ಮೂರ್ತಿ ಆಯ್ಕೆ ಆಗಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ @ShriRamTeerthಪ್ರಕಟಣೆ ಹೊರಡಿಸುವುದು ಕನ್ನಡಿಗರೆಲ್ಲರ ಪಾಲಿನ ಸಂಕ್ರಾಂತಿ ಸಂಭ್ರಮವನ್ನು ಇಮ್ಮಿಡಿಗೊಳಿಸಿದೆ. ರಾಮಲಲ್ಲಾ ಮೂರ್ತಿ ಅರಳಿರುವುದು ಹೆಚ್.ಡಿ ಕೋಟೆ ತಾಲೂಕಿನ ಶಿಲೆ ಎನ್ನುವ ಸಂಗತಿ ಮಂದಿರದ ಜತೆ ಕನ್ನಡಿಗರ ಶ್ರದ್ಧೆಯನ್ನು ಗಾಢಗೊಳಿಸಿದೆ. ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಅವರಿಗೆ ಆ ಶ್ರೀರಾಮ ದೇವರ ಅನುಗ್ರಹ ಸದಾ ಇರಲಿ ಹಾಗೂ ಅವರು ಇಂಥ ಇನ್ನೂ ಅನೇಕ ಮಹೋನ್ನತ ಶಿಲ್ಪಗಳನ್ನು ದೇಶಕ್ಕೆ ನೀಡಲಿ, ಅವರಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಕರ್ನಾಟಕದ ಹೆಮ್ಮೆಯ ಮೈಸೂರು ಮೂಲದ ಪ್ರಖ್ಯಾತ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ಆಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ರಾಮಮಂದಿರದ ವಿಗ್ರಹದ ಕೆತ್ತನೆ ನೆರವೇರಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಸಂಸದ ಪ್ರತಾಪ್ ಸಿಂಹ ಅಭಿನಂದಿಸಿದ್ದಾರೆ.