ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಶ್ರಮಿಸಿದ ಕಾರ್ಯಕರ್ತೆಯರಿಗೆ ಕೆಪಿಸಿಸಿ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಸೋಮವಾರ ಹಮ್ಮಿಕೊಂಡಿದ್ದ 'ಅಭಿನಂದನಾ ಕಾರ್ಯಕ್ರಮ'ದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್, ಮಂಗಳಮುಖಿಯರ ಸಂಘದ ಅಧ್ಯಕ್ಷೆ ಅಕೈ ಪದ್ಮಶಾಲಿ ಅವರು ಭಾಗವಹಿಸಿದ್ದರು.
ಈ ವೇಳೆ ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಪಟಾಕಿ ಬ್ಯಾನ್ ವಿಚಾರ ಮಾತನಾಡಿ, ಎಲ್ಲಾ ವ್ಯಾಪಾರಿಗಳನ್ನ ಸರ್ಕಾರ ಸಾಯಿಸ್ತಿದೆ. ಪಟಾಕಿ ಯಾರೆ ತಯಾರು ಮಾಡಿರಲಿ. ತಮಿಳುನಾಡು ಆಗಿರಲಿ, ಕರ್ನಾಟಕ ಆಗಿರಲಿ. ಅದೊಂದು ಉದ್ಯಮದಲ್ಲೇ ತಯಾರಾಗೋದು. ಮಾಲಿನ್ಯ ನಿಯಂತ್ರಿಸಲಿ. ಆದರೆ ಏಕಾಏಕಿ ಬ್ಯಾನ್ ಮಾಡೋದು ಸರಿಯಲ್ಲ. ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕ್ತಾರೆ. ಬೇಕಾದರೆ ಸರ್ಕಾರವೇ ಎಲ್ಲಾ ಪಟಾಕಿ ಖರೀದಿಸಲಿ ಎಂದರು.
ಆರ್.ಆರ್.ನಗರ, ಶಿರಾ ಸಮೀಕ್ಷೆ ವರದಿ ವಿಚಾರ ಮಾತನಾಡಿ, ಸರ್ಕಾರ ಎಷ್ಟೇ ದೌರ್ಜನ್ಯ ಮಾಡಿದ್ರೂ ಏನೂ ಆಗಿಲ್ಲ. ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯವೂ ಕುಗ್ಗಿಲ್ಲ. ಸೋಲು, ಗೆಲುವು ಇದ್ದಿದ್ದೇ. ನನಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲಾ ಪಾರ್ಟಿಗಳು ನಮಗೆ ಸಪೋರ್ಟ್ ಮಾಡಿದ್ದಾರೆ. ಸಮೀಕ್ಷೆಗಳು ಏನೇ ಇರಲಿ. ಎರಡೂ ಕಡೆ ಜನ ನಮ್ಮನ್ನ ಕೈಬಿಡುವುದಿಲ್ಲ. ಆ ಆತ್ಮ ವಿಶ್ವಾಸ ನಮಗಿದೆ. ಸರ್ಕಾರ ಸರಿಯಾಗಿ ನಡೆಸಿಲ್ಲ ಅನ್ನೋದಕ್ಕೆ ಜನರೇ ಸಾಕ್ಷಿ. ಇದು ಕುಸುಮಾ ಎಲೆಕ್ಷನ್ ಅಲ್ಲ. ಮಹಿಳೆಯರ ಎಲೆಕ್ಷನ್, ಎಲ್ಲರೂ ಕೆಲಸ ಮಾಡಿದ್ದೀರ ಎಂದರು.