ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕರ ಸಭೆ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮತ್ತೊಂದು ಸಭೆ ನಡೆಯಿತು.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಹಿರಿಯ ನಾಯಕರ ಸಭೆ ನಡೆಯಿತು. ಈ ಸಭೆಗೆ ತಡವಾಗಿ ಆಗಮಿಸಿದ ಮಾಜಿ ಸಚಿವ ಡಿಕೆ ಶಿವಕುಮಾರ್ ಸಭೆಯ ನಂತರ ಮತ್ತೊಂದು ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಒಕ್ಕಲಿಗ ಹಿರಿಯ ನಾಯಕರ ಸಭೆ ಇದಾಗಿದ್ದು, ಡಿಕೆಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟಿ.ಬಿ ಜಯಚಂದ್ರ , ಕೃಷ್ಣಭೈರೇಗೌಡ, ಎಂ ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಕೆಲ ಮುಖಂಡರು ಭಾಗಿಯಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಒಕ್ಕಲಿಗ ನಾಯಕರ ಸಭೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ವಹಿಸಿರುವ ಟಿ.ಬಿ ಜಯಚಂದ್ರ, ಹೊಸಕೋಟೆ ಉಸ್ತುವಾರಿ ಕೃಷ್ಣಬೈರೇಗೌಡ, ಕೆ.ಆರ್ ಪೇಟೆ ಉಸ್ತುವಾರಿ ಚೆಲುವರಾಯಸ್ವಾಮಿ ಹಾಗೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ವೀಕ್ಷಕರಾಗಿದ್ದ ನಾಯಕರು ಸಭೆಯಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವಿನ ಸಂಬಂಧ ಗಂಭೀರ ಸಮಾಲೋಚನೆ ನಡೆಸಿದ್ದಾರೆ. ಉಪಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಾತಿನಿಧ್ಯ ಹಾಗೂ ಪಕ್ಷದ ನಾಯಕತ್ವದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.
ಯಶವಂತಪುರದಿಂದ ಪ್ರಿಯಕೃಷ್ಣ:?ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಪ್ರಿಯಕೃಷ್ಣ ಅವರನ್ನು ಕಣಕ್ಕಿಳಿಸುವ ಸಂಬಂಧ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಎಂ ಕೃಷ್ಣಪ್ಪ ಉಪಸ್ಥಿತಿಯಲ್ಲಿ ಈ ಚರ್ಚೆ ನಡೆದಿರುವುದು ವಿಶೇಷ. ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಸಚಿವ ವಿ ಸೋಮಣ್ಣ ಅವರನ್ನು ಮರಳಿ ಪಕ್ಷಕ್ಕೆ ಸೆಳೆಯುವ ಕುರಿತು ಕೂಡ ಚರ್ಚೆ ನಡೆದಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಬಿಟ್ಟು ಕೊಡಲು ಸಿದ್ದರಿಲ್ಲದ ಸೋಮಣ್ಣಗೆ, ಆ ಕ್ಷೇತ್ರವನ್ನು ಬಿಟ್ಟು ಕೊಟ್ಟು ಅಲ್ಲಿಂದ ಪ್ರತಿನಿಧಿಸಿದ ಪ್ರಿಯಾ ಕೃಷ್ಣರನ್ನು ಯಶವಂತಪುರ ಕ್ಷೇತ್ರದಿಂದ ಕಣಕ್ಕಿಳಿಸುವ ಸಂಬಂಧ ಇಂದಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ಯಶವಂತಪುರ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದ್ದು ಜವರಾಯಿಗೌಡಗೆ ಅವಕಾಶ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಪಕ್ಷ ಒಪ್ಪಿಕೊಂಡರೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಕೃಷ್ಣಪ್ಪ ಈ ಸಂದರ್ಭ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ನಾನು ಯಾವುದೇ ನೇತೃತ್ವ ವಹಿಸಿಲ್ಲ:ಸಭೆಯ ಬಳಿಕ ಕೆಪಿಸಿಸಿ ಕಚೇರಿಯಿಂದ ತೆರಳಿದ ಮಾಜಿ ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ನಾನು ಯಾವುದೇ ಪ್ರತ್ಯೇಕ ಸಭೆ ನಡೆಸಿಲ್ಲ, ನಾನು ಯಾವುದೇ ರೀತಿಯ ನೇತೃತ್ವ ವಹಿಸಿಲ್ಲ. ನಾನು ನೇತೃತ್ವ ವಹಿಸುವ ದಿನ ಇನ್ನೂ ಬಂದಿಲ್ಲ. ಬೆಳಗ್ಗೆ ನಡೆದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದೆ ಅಷ್ಟೆ. ಇಂದಿನ ಸಭೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಮಾತನಾಡುತ್ತಾರೆ ಎಂದರು.