ಬೆಂಗಳೂರು: ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್ನಲ್ಲಿ ಉಂಟಾಗಿರುವ ಭಿನ್ನಮತ ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಆಗಸ್ಟ್ 2 ರಂದು ದೆಹಲಿಯಲ್ಲಿ ಪಕ್ಷದ ನಾಯಕರೊಂದಿಗೆ ಎರಡು ಸಭೆಗಳನ್ನು ಕರೆದಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಪಕ್ಷದ ಹೈಕಮಾಂಡ್ ಮತ್ತು ಕರ್ನಾಟಕ ಕಾಂಗ್ರೆಸ್ ಉನ್ನತ ನಾಯಕರ ನಡುವೆ ಮೊದಲ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಮತ್ತು ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಎರಡನೇ ಸಭೆಯು ಕಾಂಗ್ರೆಸ್ ಸಚಿವರೊಂದಿಗೆ ನಡೆಯಲಿದ್ದು, ಈ ಸಭೆಯಲ್ಲಿ ಪಕ್ಷದ ಕೆಲವು ಹಿರಿಯ ಶಾಸಕರು ಭಾಗವಹಿಸಬಹುದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಲೋಕಸಭಾ ಚುನಾವಣೆಯ ತಂತ್ರಗಾರಿಕೆಯ ಕುರಿತೂ ಚರ್ಚೆ:ಶತಾಯ ಗತಾಯ ಲೋಕಸಭೆಯಲ್ಲಿ ಗೆದ್ದು ಈ ಸಾರಿ ಅಧಿಕಾರ ಹಿಡಿಯಬೇಕೆಂಬ ಪ್ರಯತ್ನದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆ ಪೂರ್ವ ಸಿದ್ಧತೆಯ ಬಗ್ಗೆಯೂ ಈ ಸಭೆ ಚರ್ಚೆ ನಡೆಸಲಿದ್ದಾರೆ. ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಕುರಿತು ನಡೆಯಲಿರುವ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಬಿ.ಎನ್ ಚಂದ್ರಪ್ಪ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ , ಕಾಂಗ್ರೆಸ್ ಹಿರಿಯ ನಾಯಕರಾದ ಬಿ ಕೆ ಹರಿಪ್ರಸಾದ್, ಮುನಿಯಪ್ಪ, ಬಿಎಲ್ ಶಂಕರ್, ವೀರಪ್ಪ ಮೊಯ್ಲಿ, ಎಂಬಿ ಪಾಟೀಲ್, ಆರ್.ವಿ ದೇಶಪಾಂಡೆ ಸೇರಿದಂತೆ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ.
2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಕನಿಷ್ಠ 20 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿದ್ದು, 20 ಸ್ಥಾನ ಗೆಲ್ಲುವ ಕುರಿತು ಚುನಾವಣಾ ಕಾರ್ಯತಂತ್ರಗಳನ್ನ ರೂಪಿಸಲಾಗತ್ತೆ. ಲೋಕಸಭಾ ಚುನಾವಣಾ ತಂತ್ರಗಾರಿಕೆ ಭಾಗವಾಗಿ ನಡೆಯಲಿರುವ ಸಭೆ ಆಗಸ್ಟ್ 2ರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.