ಬೆಂಗಳೂರು:ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆ ಪ್ರಚಾರ ಸಂದರ್ಭ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರದ ಹಿನ್ನೆಲೆ ಮುನಿರತ್ನ ವಿವಿಧ ಮನೆಗೆ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ನನ್ನ ಬಗ್ಗೆ ಅತ್ಯಂತ ತುಚ್ಛವಾಗಿ ಮಾತನಾಡಿದ್ದಾರೆ.
ನಾನು ವಿಧವೆಯಾದ ಬಳಿಕ ವಿದೇಶಕ್ಕೆ ತೆರಳಿ ಉನ್ನತ ವ್ಯಾಸಂಗ ನಡೆಸಿ ಹಿಂತಿರುಗಿ ಬಂದು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಸಮಾಜದಲ್ಲಿ ನನಗೆ ಗೌರವಯುತವಾಗಿ ಬದುಕಲು ಅವಕಾಶ ಇಲ್ಲವೇ? ಚುನಾವಣೆಯನ್ನು ಚುನಾವಣೆಯಂತೆ ಎದುರಿಸಬೇಕು. ವೈಯಕ್ತಿಕ ವಿಚಾರ ಪ್ರಸ್ತಾಪಿಸಿ ಕ್ಷುಲ್ಲಕ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ನನ್ನ ಬಗ್ಗೆ ಏನೇನೆಲ್ಲ ಮಾತನಾಡಿದ್ದೀರಿ? ಗಂಡನ ತಿಂದವಳಿಗೆ ಯಾಕೆ ರಾಜಕೀಯ ಅಂತಾ ಹೇಳಿದ್ದೀರಿ. ನನ್ನ ಕಷ್ಟ ಯಾರಿಗೂ ಬೇಡ. ನನ್ನ ಪರಿಸ್ಥಿತಿ ನಿಮ್ಮ ಮಗಳಿಗೆ ಬಾರದೆ ಇರಲಿ. ನಾನು ಮುನಿರತ್ನ ಅಣ್ಣನಿಗೆ ಕೇಳಬೇಕು, ಹೆಣ್ಣ ಮಕ್ಕಳು ರಾಜಕೀಯಕ್ಕೆ ಬರೋದು ತಪ್ಪಾ? ನಾನು ಐದು ವರ್ಷದ ಹಿಂದೆ ಅರಿಶಿಣ ಕುಂಕುಮ ಕಳೆದು ಕೊಂಡಿದ್ದೆ, ಅದನ್ನ ಕ್ಷೇತ್ರದ ಜನ ಮತ್ತೆ ವಾಪಸ್ ಕೊಟ್ಟೇ ಕೊಡ್ತಾರೆ.
ರಾಜರಾಜೇಶ್ವರಿನಗರದ ಜನ ನನಗೆ ಅರಿಶಿಣ ಕುಂಕುಮ ನೀಡೇ ನೀಡ್ತಾರೆ ಎಂದರು. ಚುನಾವಣೆ ಶುರುವಾದಾಗಿನಿಂದ ನನ್ನ ಮೇಲೆ ಗದಾ ಪ್ರಹಾರ, ತೀಕ್ಷ್ಣ ಮಾತುಗಳು ಬರುತ್ತಿವೆ. ಗಂಡ ಸತ್ತ ಮುಂಡೆಗೇಕೆ ರಾಜಕೀಯ? ಅಂತಾ ಹೇಳಿದ್ದೀರಿ. ನಿಮ್ಮ ಮನೆಯ ಹೆಣ್ಮಗಳಿಗೆ ಹೀಗಾಗಿದ್ರೆ ನೀವು ಇದೇ ರೀತಿ ಮಾತಾಡ್ತಿದ್ರಾ? ನಾನೇನು ತಪ್ ಮಾಡಿದ್ದೀನಿ.
ನಾನು ಐದು ವರುಷಗಳ ಹಿಂದೆ ಅರಿಶಿನ ಕುಂಕುಮನ ಕಳ್ಕೊಂಡಿದ್ದೀನಿ. ಅದನ್ನು ಈ ಕ್ಷೇತ್ರದ ಮತದಾರರು ಗೆಲುವಿನ ರೀತಿಯಲ್ಲಿ ಅರಿಶಿನ ಕುಂಕುಮಾನ ಕೊಡ್ತಾರೆ. ಖಂಡಿತ ಈ ಜನರು ಉಡಿ ತುಂಬಿ, ಅರಿಶಿನ ಕುಂಕುಮ ಕೊಡ್ತಾರೆ ಅನ್ನೋ ಭರವಸೆ ಇದೆ ಎಂದರು.