ಕರ್ನಾಟಕ

karnataka

ETV Bharat / state

ಉಪಜಾತಿಗಳಿಗೆ ಸಿಗದ ಮೀಸಲು ಸೌಲಭ್ಯದ ಬಗ್ಗೆ ಗೊಂದ‌ಲ ಇದೆ: ಸಚಿವ ಎಂ ಬಿ ಪಾಟೀಲ್ - Minister MB Patil

ಉಪಜಾತಿಗಳಿಗೆ ಸಂಬಂಧಿಸಿದ ಮೀಸಲು ಸೌಲಭ್ಯದ ಬಗ್ಗೆ ಕೆಲವು ಗೊಂದಲಗಳಿವೆ. ಇದನ್ನು ಸರಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡಿದ್ದೇವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

reservation
ಉಪಜಾತಿಗಳಿಗೆ ಸಿಗದ ಮೀಸಲು ಸೌಲಭ್ಯ ಬಗ್ಗೆ ಗೊಂದ‌ಲ ಇದೆ: ಸಚಿವ ಎಂ ಬಿ ಪಾಟೀಲ್

By ETV Bharat Karnataka Team

Published : Dec 18, 2023, 6:52 PM IST

ಬೆಂಗಳೂರು : ಒಂದೇ ಜಾತಿಗೆ ಸೇರಿದ ಉಪಜಾತಿಗಳಿಗೆ ಮೀಸಲು ಸೌಲಭ್ಯ ಸಿಗುವುದಕ್ಕೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿವೆ. ಇದನ್ನು ಸರಿಪಡಿಸಿ ಎಂದಷ್ಟೇ ನಾವು ಮುಖ್ಯಮಂತ್ರಿಯವರಲ್ಲಿ ಕೇಳಿಕೊಂಡಿದ್ದೇವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸ್ಪಷ್ಟಪಡಿಸಿದರು‌.

ವೈಜ್ಞಾನಿಕ ಜಾತಿಗಣತಿಗಾಗಿ ಆಗ್ರಹಿಸಿ 'ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ' ವತಿಯಿಂದ ನೀಡಲಾಗಿರುವ ಮನವಿಗೆ ಸಹಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇರುವ ಸಮಸ್ಯೆಗಳನ್ನು ಗಮನಕ್ಕೆ ತರುವುದರಲ್ಲಿ ಯಾವುದೇ ತಪ್ಪು ಇಲ್ಲ. ಉದಾಹರಣೆಗೆ, ಲಿಂಗಾಯತರಲ್ಲಿ ಗಾಣಿಗ, ಸಾದರ ಹೀಗೆ 50ಕ್ಕೂ ಹೆಚ್ಚು ಉಪಜಾತಿಗಳು ಇದ್ದು ಅವರಿಗೆ ಲಿಂಗಾಯತ - ಗಾಣಿಗ, ಲಿಂಗಾಯತ- ಸಾದರ ಎಂದು ನಮೂದಿಸಿದ್ದರೆ 2ಎ ಪ್ರವರ್ಗದಡಿ ಮೀಸಲಾತಿ ಸಿಗುವುದಿಲ್ಲ. ಈ ಕಾರಣಕ್ಕೆ ಅವರೆಲ್ಲ ಹಿಂದೂ -ಗಾಣಿಗ, ಹಿಂದೂ -ಸಾದರ ಎಂದು ನಮೂದಿಸಿಕೊಳ್ಳುತ್ತಾರೆ ಎಂದು ವಿವರಿಸಿದರು.

ಇಂತಹ ಸಮಸ್ಯೆಗಳನ್ನು ಸರಿಪಡಿಸಲು ನಾವು ಮುಖ್ಯಮಂತ್ರಿ ಅವರನ್ನು ಕೋರಿದ್ದೇವೆ. ಈ ತೊಂದರೆಗಳ ಬಗ್ಗೆ ಅವರಿಗೂ ಗೊತ್ತಿದೆ. ಇಂತಹ ತೊಡಕುಗಳು ಒಕ್ಕಲಿಗ ಜನಾಂಗ ಸೇರಿದಂತೆ ಬೇರೆ ಸಮುದಾಯಗಳಿಗೂ ಇರಬಹುದು. ಇದ್ದರೆ, ಅವನ್ನು ಕೂಡ ಸರಿಪಡಿಸುವುದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸಿನಲ್ಲಿ 'ಒಬ್ಬ ವ್ಯಕ್ತಿ, ಒಂದು ಹುದ್ದೆ' ನೀತಿ ಅನುಸರಿಸುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಅದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬೇರೆಯವರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ವರಿಷ್ಠರು ತೀರ್ಮಾನ ತೆಗೆದುಕೊಂಡಾಗ ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದರು.

ಜಾತಿ ಗಣತಿ ವರದಿ ವಿಚಾರ:ಜಾತಿಗಣತಿ ವರದಿ ವಿಚಾರವಾಗಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಕಾಂತರಾಜು ಆಯೋಗದ ವರದಿಯನ್ನು ಹಿಂದುಳಿದ ವರ್ಗದ ಆಯೋಗ ಇನ್ನೂ ಸರಕಾರಕ್ಕೆ ಸಲ್ಲಿಸಿಲ್ಲ. ಆಯೋಗ ವರದಿ ಸಲ್ಲಿಸಿದಾಗ ಆ ಬಗ್ಗೆ ಚಿಂತನೆ ನಡೆಸುತ್ತೇವೆ. ವರದಿ ಸಲ್ಲಿಕೆಗೂ ಮುನ್ನ ವಿರೋಧಿಸುವುದು ಸರಿಯಲ್ಲ. ವರದಿಯಲ್ಲೇನಿದೆ ಎನ್ನುವುದು ಖುದ್ದು ನನಗೂ ಗೊತ್ತಿಲ್ಲ. ಅದು ಹೇಗೆ ಅವೈಜ್ಞಾನಿಕ ಎಂದು ಆರೋಪ ಮಾಡುತ್ತಾರೆ. ಆಯೋಗದ ವರದಿಯನ್ನು ನೋಡಿ ಪರಾಮರ್ಶೆ ಮಾಡಬೇಕೇ ಹೊರತು ಮುಂಚಿತವಾಗಿಯೇ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದ್ದರು.

ಜಾತಿಗಣತಿ ವಿರೋಧ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್​, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ಬಗ್ಗೆ ನಿನ್ನೆಯೂ ಪ್ರತಿಕ್ರಿಯೆ ನೀಡಿದ್ದೇನೆ. ಜಾತಿಗಣತಿ ವರದಿಯಲ್ಲಿ ಏನಿದೆ ಅಂತಾನೆ ಗೊತ್ತಿಲ್ಲವಲ್ಲ. ನಾವು 170 ಕೋಟಿ ಖರ್ಚು ಮಾಡಿ ಒಂದು ಸಮೀಕ್ಷೆ ಮಾಡಿಸಿದ್ದೇವೆ. ಆ ಸಮೀಕ್ಷೆ ಹೊರಗಡೆ ಬಂದ ಬಳಿಕ ಸರ್ಕಾರ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ :ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರ ಚರ್ಚೆ ಆಗಿಲ್ಲ: ಗೃಹ ಸಚಿವ ಪರಮೇಶ್ವರ್

ABOUT THE AUTHOR

...view details