ಬೆಂಗಳೂರು: ಪಡಿತರ ಚೀಟಿಗಳ ವಿತರಣೆ ಮತ್ತು ನ್ಯಾಯಬೆಲೆ ಅಂಗಡಿಗಳ ಹಂಚಿಕೆ ವ್ಯವಸ್ಥೆಯಲ್ಲಿನ ಗೊಂದಲಗಳಿಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅಂಗಡಿ ಹಂಚಿಕೆ ಕುರಿತು ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಿ ಸೂಕ್ತವಾದ ಕೈಗೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಿಗೆ ನಿದೇಶಿಸಿದೆ.
ರಾಜಾಜಿನಗರ ಶಾಸ್ತ ಮಹಿಳಾ ಸಂಘ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ದೊಡ್ಡ ಬಿದರಕಲ್ಲು ನಿವಾಸಿಯಾಗಿರುವ ಬಿ.ಮಂಜುನಾಥ್ ಅವರಿಗೆ ವಿಕಲಚೇತನರ ಕೋಟಾದಲ್ಲಿ ಹಂಚಿಕೆಯಾಗಿದ್ದ ನ್ಯಾಯಬೆಲೆ ಅಂಗಡಿಯನ್ನು ಮೇಲ್ಮನವಿ ಪ್ರಾಧಿಕಾರದ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಮಂಜುನಾಥ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪಡಿತರ ಚೀಟಿಗಳ ವಿತರಣೆ ಮತ್ತು ನ್ಯಾಯಬೆಲೆ ಅಂಗಡಿಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಗೊಂದಲಗಳಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.
ಅಲ್ಲದೆ, ನಗರ ಪ್ರದೇಶದಲ್ಲಿ 800 ಮತ್ತು ಗ್ರಾಮೀಣ ಭಾಗಗಳಲ್ಲಿ 500 ಚೀಟಿಗಳಿಗೊಂದರಂತೆ ನ್ಯಾಯಬೆಲೆ ಅಂಗಡಿಗೆ ಅನುಮತಿ ನೀಡಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ. ಆದರೆ, ಪಡಿತರ ಚೀಟಿಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಹಂಚಿಕೆ ಮಾಡುವಲ್ಲಿ ತಾರತಮ್ಯ ಮತ್ತು ವಿವೇಚನಾ ರಹಿತ ನಿರ್ಧಾರಗಳಿಂದ ಈ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ನಿಯಮಗಳನ್ನು ಪಾಲಿಸಿ ಈ ಹಂಚಿಕೆ ಮಾಡಬೇಕು ಎಂದು ನ್ಯಾಯಪಪೀಠ ಅಧಿಕಾರಿಗಳಿಗೆ ಸೂಚನೆ ನೀಡಿದೆ.